ವರದಿ : ರಾಮಚಂದ್ರ ಮರಿಯಮ್ಮನಹಳ್ಳಿ
ಹೊಸಪೇಟೆ : ತಾಲೂಕಿನ ಮರಿಯಮ್ಮನಹಳ್ಳಿಗೆ ಸಮೀಪದ ಹನುಮನಹಳ್ಳಿ ಗ್ರಾಮದಲ್ಲಿ ಗಾಂಜಾ ವ್ಯಸನಿ ಹಾಗೂ ಮಾರಾಟಗಾರನೊಬ್ಬನನ್ನು ಮರಿಯಮ್ಮನಹಳ್ಳಿ ಠಾಣೆಯ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಮರಿಯಮ್ಮನಹಳ್ಳಿಗೆ ಸಮೀಪದ ಹನುಮನಹಳ್ಳಿ ಗ್ರಾಮದ ವಡ್ಡರ ಮಂಜುನಾಥ ಅಲಿಯಾಸ್ ಗಿಚ್ಚ ಎಂಬಾತನನ್ನು ಖಚಿತ ಮಾಹಿತಿ ಮೇರೆಗೆ ಸಿ.ಪಿ.ಐ ಉಮೇಶ್.ಎಂ ಹಾಗೂ ಪಟ್ಟಣದ ಪಿ.ಎಸ್.ಐ ಎಂ.ಶಿವಕುಮಾರ್ ಅವರನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಆತನಿಂದ 196 ಗ್ರಾಂ. ನಷ್ಟು ಗಾಂಜಾ ವಶಪಡಿಸಿಕೊಂಡಿದ್ದು, ಇದು ಸುಮಾರು 2000 ರೂಪಾಯಿ ಬೆಲೆ ಬಾಳುತ್ತದೆ ಎಂದು ಅಂದಾಜಿಸಲಾಗಿದೆ.
ವಡ್ಡರ ಮಂಜುನಾಥನ ಮೇಲೆ ಇದುವರೆಗೂ ಮೊಬೈಲ್ ಕಳ್ಳತನದ ಆರೋಪಗಳಿದ್ದವು. ಈತನಿಗೆ ಹೊಸಪೇಟೆಯಲ್ಲಿ ಇತ್ತೀಚೆಗೆ ಪೊಲೀಸರ ಬಲೆಗೆ ಬಿದ್ದ ಗಾಂಜಾ ಸಾಗಾಣಿಕೆಗಾರರ ಜೊತೆ ಸಂಪರ್ಕವಿದೆ ಎನ್ನಲಾಗುತ್ತಿದ್ದು, ಹೊಸಪೇಟೆಯ ಹೇಮಲತಾ ಎಂಬುವರ ಬಳಿ ಗಾಂಜಾ ಖರೀದಿಸಿ ಮನೆಯಲ್ಲಿ ಶೇಖರಿಸಿಟ್ಟು, ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ಖಚಿತ ಮಾಹಿತಿ ಮೇರೆಗೆ ಸಿ.ಪಿ.ಐ ಉಮೇಶ್.ಎಂ ಹಾಗೂ ಪಟ್ಟಣದ ಪಿ.ಎಸ್.ಐ ಎಂ.ಶಿವಕುಮಾರ್ ಅವರನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಈ ಸಂಬಂಧ ಕೂಡ್ಲಿಗಿ ಡಿವೈಎಸ್‍ಪಿ ಪಿ.ಹರೀಶ್ ಪಟ್ಟಣ ಠಾಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಟ್ಟಣ ಪೊಲೀಸರಿಂದ ಸುತ್ತಮುತ್ತಲ ಗ್ರಾಮಗಳಲ್ಲಿ ಗಾಂಜಾ ಬಳಸುವ ಹಾಗೂ ಮಾರಾಟ ಮಾಡುವವರ ಶೋಧ ಕಾರ್ಯ ಮುಂದುವರೆದಿದೆ.










