ಹೊಸಪೇಟೆ: ತೀವ್ರ ಕುತೂಹಲ ಕೆರಳಿಸಿದ್ದ ಹಾಗೂ ಪ್ರತಿಷ್ಟೆಯ ಕಣವಾಗಿದ್ದ ಹೊಸಪೇಟೆ ತಾಲೂಕಿನ 114 ಡಣಾಪುರ ಗ್ರಾ.ಪಂ.ನ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯು ತೀವ್ರ ಪೈಪೋಟಿಯೊಂದಿಗೆ ನಡೆದು ಬಿಜೆಪಿ ಬೆಂಬಲಿತ ಉಮಾ ಸಿ.ಡಿ.ಯಲ್ಲಪ್ಪ ಅಧ್ಯಕ್ಷರಾಗಿ ಹಾಗೂ ವಿ.ಜ್ಯೋತಿ ಉಪಾಧ್ಯಕ್ಷರಾಗಿ ಆಯ್ಕೆಯಾದರು.
ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿಗೆ ಸಮೀಪದ 114 ಡಣಾಪುರ ಗ್ರಾಮ ಪಂಚಾಯಿತಿಯು ಒಟ್ಟು 32 ಸದಸ್ಯರನ್ನು ಹೊಂದಿದ್ದು, ಅಧ್ಯಕ್ಷ ಸ್ಥಾನವು ಸಾಮಾನ್ಯ ಮಹಿಳಾ ಹಾಗೂ ಉಪಾಧ್ಯಕ್ಷ ಸ್ಥಾನವು ಪ.ಜಾ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಉಮಾ ಸಿ.ಡಿ.ಯಲ್ಲಪ್ಪ, ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ವಿ.ಜ್ಯೋತಿ, ಅಲ್ಲದೇ ಕಾಂಗ್ರೆಸ್‌ನ ಬೆಂಬಲಿತ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಅಭ್ಯರ್ಥಿ ಹೆಚ್.ಪಾರ್ವತಿ ಹೊಸಳ್ಳಿ, ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಹೆಚ್.ಮಲ್ಲೇಶ್ ಸ್ಪರ್ಧಿಸಿದ್ದರು.
ನಿನ್ನೆ ನಡೆದ ಜಿದ್ದಾಜಿದ್ದಿಯ ಚುನಾವಣೆಯಲ್ಲಿ ಆಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಉಮಾ ಸಿ.ಡಿ.ಯಲ್ಲಪ್ಪರಿಗೆ 18 ಮತಗಳು ಕಾಂಗ್ರಸ್ ಬೆಂಬಲಿತ ಉಪಾಧ್ಯಕ್ಷ ಅಭ್ಯರ್ಥಿ ಹೆಚ್.ಪಾರ್ವತಿ ಹೊಸಳ್ಳಿಯವರಿಗೆ 14 ಮತಗಳು ಬಂದವು. ಜೊತೆಗೆ ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿಗೆ 18 ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗೆ 14 ಮತಗಳು ದೊರೆತವು. ಚುನಾವಣೆಯ ನಂತರ ಹೆಚ್ಚು ಮತ ಪಡೆದು ಮುಂಚೂಣಿಯಲ್ಲಿದ್ದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಉಮಾ ಸಿ.ಡಿ.ಯಲ್ಲಪ್ಪರು ಅಧ್ಯಕ್ಷರಾಗಿ ಹಾಗೂ ವಿ.ಜ್ಯೋತಿಯವರು ಉಪಾಧ್ಯಕ್ಷರಾಗಿ ಆಯ್ಕೆಯಾದರು ಎಂದು ಚುನಾವಣಾ ಅಧಿಕಾರಿ ಹೊಸಪೇಟೆ ಸ.ಪ್ರ.ದ.ಕಾಲೇಜಿನ ಪ್ರೊ. ಕೆ.ವೆಂಕಟೇಶ್ ಘೋಷಿಸಿದರು. ಸ್ಥಳದಲ್ಲಿ ತಹಶೀಲ್ದಾರ್ ವಿಶ್ವನಾಥ್, ಕಂದಾಯ ನಿರೀಕ್ಷಕ ಅಂದಾನಗೌಡ, ಪಿಡಿಓ ಮಂಜುಳಾ ರಾಣಿ, ಗ್ರಾಮ ಲೆಕ್ಕಿಗೆ ಶಾರದಮ್ಮ ಹಾಗೂ ಇತರರು ಇದ್ದರು.ಈ ಸಂದರ್ಭದಲ್ಲಿ ಮಾಜಿ ಶಾಸಕ ನೇಮಿರಾಜ್ ನಾಯ್ಕ್, ಮುಖಂಡರಾದ ಕೃಷ್ಣನಾಯ್ಕ್, ವೀರೇಶ್ ಸ್ವಾಮಿ, ವ್ಯಾಸನಕೆರೆ ಶ್ರೀನಿವಾಸ, ಗರಗ ಪ್ರಕಾಶ, ಸಿ.ಡಿ.ಯಲ್ಲಪ್ಪ, ಗಂಡಿ ಬಸವರಾಜ್, ಪಿ. ಓಬಪ್ಪ, ಬಿ.ಎಸ್. ರಾಜಪ್ಪ, ಜಗದೀಶ್, ಮಜ್ಜಿಗೆ ಶಿವಪ್ಪ, ಕಿರಣ, ದೊಡ್ಡ ರಾಮಣ್ಣ, ಸೆರೆಗಾರ್ ನವೀನ್ ಕುಮಾರ್, ಎಲ್. ಮಂಜುನಾಥ, ಕಂಪಾಲೆಪ್ಪ ಹಾಗೂ ಇತರರು ಇದ್ದರು.
ಸೂಕ್ತ ಬಿಗಿ ಬಂದೋಬಸ್ತ್: ತೀವ್ರ ಪೈಪೋಟಿಯ ನಡುವೆ ನಡೆದ ಚುನಾವಣೆಯ ಹಿನ್ನಲೆಯಲ್ಲಿ ಪೊಲೀಸ್ ಇಲಾಖೆಯಿಂದ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಹಾಗೂ ಶಾಂತಿಯನ್ನು ಕಾಪಾಡಲು ಕೂಡ್ಲಿಗಿ ಡಿವೈಎಸ್‌ಪಿ ಹರೀಶರ ನೇತೃತ್ವದಲ್ಲಿ ಇಬ್ಬರು ಸಿಪಿಐಗಳು, ಆರು ಜನ ಪಿಎಸ್‌ಐಗಳು, 60 ಜನ ಪೊಲೀಸರ ನೆರವಿನೊಂದಿಗೆ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.










