ಹೊಸಪೇಟೆ : ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯ ನಿರ್ಮಾಣ ಕಾಮಗಾರಿಗೆ ಹುಡಾ ಅಧ್ಯಕ್ಷ ಅಶೋಕ್ ಜೀರೆ ಚಾಲನೆ…

136
firstsuddi

ವರದಿ : ರಾಮಚಂದ್ರ ಮರಿಯಮ್ಮನಹಳ್ಳಿ

ಹೊಸಪೇಟೆ : ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರ ನಗರಾಭಿವೃದ್ಧಿ ಯೋಜನೆಯ ದೂರದೃಷ್ಟಿಯೇ ತಾಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳ ಚಾಲನೆಗೆ ಪೂರಕವಾಗಿದೆ ಎಂದು ಹುಡಾ ಅಧ್ಯಕ್ಷ ಅಶೋಕ್ ಜೀರೆ ಅಭಿಪ್ರಾಯಪಟ್ಟರು.
ಹೊಸಪೇಟೆ ನಗರದ ಎಪಿಎಂಸಿ ಆವರಣದಲ್ಲಿ ಹಮ್ಮಿಕೊಂಡಿದ್ದ 2018-19ನೇ ಸಾಲಿನ ಹಾಸ್ಟೆಲ್ ಕಟ್ಟಡಗಳ ನಿರ್ಮಾಣ ಕಾರ್ಯಕ್ರಮದ ಅಡಿಯಲ್ಲಿ ಮಂಜೂರಾದ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯದ ನಿರ್ಮಾಣ ಕಾಮಗಾರಿಯ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಪಿಯುಸಿ, ತಾಂತ್ರಿಕ, ಪದವಿ ಹಾಗೂ ವೃತ್ತಿಪರ ಕಾಲೇಜು ವಿದ್ಯಾರ್ಥಿನಿಯರಿಗೆ ಹಾಸ್ಟೆಲ್ ತುಂಬಾ ಅವಶ್ಯವಿದ್ದು, ನಗರದ ಮಧ್ಯಬಾಗದಲ್ಲಿ ವಸತಿನಿಲಯ ನಿರ್ಮಾಣವಾಗುತ್ತಿರುವುದು ಸಂತಸವಾಗಿದೆ. ಸಚಿವರಿಗೆ ಅಭಿವೃದ್ಧಿಯ ದೂರದೃಷ್ಟಿ ಇರುವ ಕಾರಣದಿಂದಲೇ ನಗರಾಭಿವೃದ್ಧಿ ಸೇರಿದಂತೆ ಶೈಕ್ಷಣಿಕ ಕ್ಷೇತ್ರದಲ್ಲಿ ಅಭಿವೃದ್ಧಿಯಾಗುತ್ತಲಿದೆ ಎಂದರು.
ತಾಲೂಕು ಪಂಚಾಯತಿ ಅಧ್ಯಕ್ಷರಾದ ನಾಗವೇಣಿ ಬಸವರಾಜ ಮಾತನಾಡಿ, ಹೆಣ್ಣು ಮಕ್ಕಳು ತಮ್ಮ ಭವಿಷ್ಯವನ್ನು ಸ್ವತಂತ್ರರಾಗಿ ರೂಪಿಸಿಕೊಳ್ಳಲು ವಿದ್ಯಾಭ್ಯಾಸದ ಅವಶ್ಯಕತೆ ಇದ್ದು, ಉನ್ನತ ಶಿಕ್ಷಣವನ್ನು ಪಡೆಯುವ ಇಚ್ಚೆಯುಳ್ಳ ವಿದ್ಯಾರ್ಥಿನಿಯರಿಗೆ ವಸತಿ ಸೌಲಭ್ಯವನ್ನು ಒದಗಿಸುವ ಸಲುವಾಗಿ ನಿರ್ಮಿಸಲಾಗುತ್ತಿರುವ ವಸತಿ ನಿಲಯಗಳು ಸ್ತ್ರೀ ಶಿಕ್ಷಣದ ಏಳಿಗೆಗೆ ಪೂರಕವಾಗುತ್ತವೆ ಎಂದರು.
ಹೊಸಪೇಟೆಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಬಳ್ಳಾರಿಯ ಗೃಹ ಮಂಡಳಿ ಸಹಯೋಗದಲ್ಲಿ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದ ಕಾಮಗಾರಿಯು 3 ಕೋಟಿ 21 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಸಚಿವರ ಆಪ್ತ ಸಹಾಯಕ ಧಮೇರ್ಂದ್ರ ಸಿಂಗ್, ಪ್ರವೀಣ್ ಸಿಂಗ್, ಮಾಜಿ ಹುಡಾ ಅಧ್ಯಕ್ಷರಾದ ಅಯ್ಯಾಳಿ ತಿಮ್ಮಪ್ಪ, ವೆಂಕಟೇಶ್ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹಾಗೂ ಇತರರು ಇದ್ದರು.