ಹೋಂ ಐಸೋಲೇಷನ್ ಮಾರ್ಗವನ್ನು ಬಲಪಡಿಸುವಂತೆ ಮೋದಿ ಸಲಹೆ ನೀಡಿದ್ದಾರೆ : ಸಚಿವ ಸುಧಾಕರ್.

83
Firstsuddi

ಬೆಂಗಳೂರು : ಕೊರೊನಾ ಎರಡನೇ ಅಲೆ ದಿನೇ ದಿನೇ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆ ಇಂದು ಪ್ರಧಾನಿ ನರೇಂದ್ರ ಮೋದಿಯವರು ಕೊರೊನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ 10 ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವೀಡಿಯೋ ಕಾನ್ಪರೆನ್ಸ್ ಮೂಲಕ ಸಭೆ ನಡೆಸಿದ್ದಾರೆ. ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಪಿಎಂ ಮೋದಿ ಜೊತೆಗಿನ ವಿಡಿಯೋ ಸಂವಾದದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಆರೋಗ್ಯ ಸಚಿವ ಡಾ. ಸುಧಾಕರ್ ಅವರು, ಕೋವಿಡ್ ಸೋಂಕು ನಿಯಂತ್ರಣಕ್ಕಾಗಿ ಹೋಂ ಐಸೋಲೇಷನ್ ಮಾರ್ಗವನ್ನು ಬಲಪಡಿಸಿಕೊಳ್ಳಿ, ಅಲ್ಲದೇ ಟೆಲಿಕಾಲಿಂಗ್ ಮೂಲಕ ಉಪಚಾರ, ಚಿಕಿತ್ಸೆ ನೀಡಿ ಎಂದು ಪ್ರಧಾನಿ ಅವರು ಸಲಹೆ ನೀಡಿದ್ದಾರೆ ಎಂದರು.

ರಾಜ್ಯದಿಂದ ಪ್ರಧಾನಿ ಮೋದಿ ಅವರಿಗೆ ಆಮ್ಲಜನಕ ಪೂರೈಕೆ ಮತ್ತು ರಮ್ಡೆಸಿವಿರ್ ಸರಬರಾಜು ಬೇಡಿಕೆ ಇಟ್ಟಿದ್ದು, ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ. ಈ ತಿಂಗಳ ಕೊನೆವರೆಗೂ ಸಾವಿರ ಟನ್ ಆಮ್ಲಜನಕ ಪೂರೈಕೆ ಮಾಡಬೇಕು. ಮೇ. 1ರಿಂದ 1,500 ಮೆಟ್ರಿಕ್ ಟನ್ ಸರಬರಾಜು ಮಾಡಬೇಕು ಎಂದು ಮನವಿ ಮಾಡಿದ್ದಾರೆ. ರಮ್ಡೆಸಿವಿರ್ ನಮ್ಮ ರಾಜ್ಯದಲ್ಲೇ ಉತ್ಪಾದನೆ ಆದರೂ ಕೂಡ ಅದು ಸಾಕಾಗುತ್ತಿಲ್ಲ. ಹಾಗಾಗಿ ತಕ್ಷಣ 2 ಲಕ್ಷ ವಯಲ್ ಕಳಿಸಿಕೊಡಲು ಬೇಡಿಕೆ ಇರಿಸಿದ್ದಾರೆ. ನಮ್ಮ ಬೇಡಿಕೆ ಮತ್ತು ನಾವು ಕೈಗೊಂಡಿರುವ ಕ್ರಮಗಳ ಬಗ್ಗೆ ಸಿಎಂ ಬಿ.ಎಸ್.ಯಡಿಯೂರಪ್ಪನವರು ಪ್ರಧಾನಿ ಮೋದಿಯವರಿಗೆ ಸಮಗ್ರವಾಗಿ ತಿಳಿಸಿದ್ದಾರೆ. ವೀಕೆಂಡ್ ಕರ್ಫ್ಯೂ, ನೈಟ್ ಕರ್ಫ್ಯೂ, ಕಠಿಣ ಮಾರ್ಗಸೂಚಿ ಕುರಿತು ಎಲ್ಲ ವಿವರ ನೀಡಿದ್ದು, ರಾಜ್ಯದಲ್ಲಿ ನಾಲ್ಕೈದು ದಿನದಲ್ಲಿ ಕೊರೊನಾ ನಿಯಂತ್ರಣಕ್ಕೆ ಬರುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದರು.