10 ರೂ. ಆಮಿಷವೊಡ್ಡಿ 13ರ ಬಾಲಕಿ ಮೇಲೆ ಅತ್ಯಾಚಾರ ; ವೃದ್ಧ ಸೇರಿ ಇಬ್ಬರ ಬಂಧನ…

57
firstsuddi

ರಾಯ್‌ಪುರ : 10 ರೂ. ಆಮಿಷವೊಡ್ಡಿ 13 ವರ್ಷದ ಬಾಲಕಿಯ ಮೇಲೆ 76 ವರ್ಷದ ವೃದ್ಧ ಮತ್ತು ಇನ್ನೋರ್ವ ವ್ಯಕ್ತಿ ಸೇರಿ ಅನೇಕ ಬಾರಿ ಅತ್ಯಾಚಾರವೆಸಗಿರುವ ಘಟನೆ ಛತ್ತೀಸ್ ಗಢದ ಬಲೋದಬಜಾರ್ ಜಿಲ್ಲೆಯಲ್ಲಿ ನಡೆದಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಬಾಲಕಿಯ ಮೇಲೆ ಅತ್ಯಾಚಾರ ಶನಿವಾರ ನಡೆದಿದ್ದು, ನೆರೆ ಮನೆಯ ಮಹಿಳೆ ಈ ಕುರಿತು ಬಾಲಕಿ ಪೋಷಕರನ್ನು ಎಚ್ಚರಿಸಿದ ನಂತರ ಬೆಳಕಿಗೆ ಬಂದಿದೆ.

ಬಾಲಕಿಯ ಪೋಷಕರು ನೀಡಿದ ದೂರಿನ ಆಧಾರದ ಮೇಲೆ ಆರೋಪಿಗಳಾದ ಕುಂಜ್ರಾಮ್ ವರ್ಮಾ (76) ಮತ್ತು ರಮೇಶ್ ವರ್ಮಾ (47) ಅವರನ್ನು ಜುಲೈ 31ರಂದು ಬಂಧಿಸಲಾಗಿದೆ ಎಂದು ಬಲೋದಬಜಾರ್ ಕೊತ್ವಾಲಿ ಪೊಲೀಸ್ ಠಾಣಾಧಿಕಾರಿ (ಎಸ್ ಎಚ್ ಒ) ಯದುಮಣಿ ಸಿದರ್ ತಿಳಿಸಿದ್ದಾರೆ.

ಆ ಬಾಲಕಿ ವಾಸಿಸುವ ಪ್ರದೇಶದಲ್ಲಿಯೇ ವಾಸಿಸುತ್ತಿದ್ದ ಕುಂಜ್ರಾಮ್ ಪ್ರತಿ ಬಾರಿ ಆಕೆಗೆ 10 ರೂ. ನೀಡುವುದಾಗಿ ಆಮಿಷವೊಡ್ಡಿ ತನ್ನ ಮನೆಗೆ ಕರೆದು ಅತ್ಯಾಚಾರ ಮಾಡುತ್ತಿದ್ದ. ಕುಂಜ್ರಾಮ್ ಗೆ ಪರಿಚಿತರಾಗಿರುವ ರಮೇಶ್ ಕೂಡ ಆಕೆಗೆ 10 ರೂ. ನೀಡುವ ಹಣದ ಆಮಿಷವೊಡ್ಡಿ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ. ಇಬ್ಬರ ಮನೆಯಿಂದ ಬಾಲಕಿ ಹೊರಗೆ ಬರುತ್ತಿರುವುದನ್ನು ನೆರೆಮನೆಯ ಮಹಿಳೆಯೊಬ್ಬರು ಗಮನಿಸಿದಾಗ, ಆಕೆ ಬಾಲಕಿಯ ತಾಯಿಗೆ ಮಾಹಿತಿ ನೀಡಿದ್ದಾಳೆ. ಬಾಲಕಿ ತನಗಾದ ಕಷ್ಟವನ್ನು ವಿವರಿಸಿದ ನಂತರ, ಆಕೆಯ ಪೋಷಕರು ಪ್ರಕರಣ ದಾಖಲಿಸಿದ್ದಾರೆ. ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಬಾಲಕಿಯನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಆಕೆಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿಸಿದ್ದಾರೆ.