ಮಂಡ್ಯ : 100 ರೂ ಕೂಲಿ ಬಾಕಿ ಹಣ ನೀಡಲಿಲ್ಲ ಎಂಬ ಕಾರಣಕ್ಕೆ ಕಾರ್ಮಿಕ ಮಾಲೀಕನನ್ನೇ ಕೊಲೆಮಾಡಿರುವ ಘಟನೆ ಜಿಲ್ಲೆಯ ಕೆ.ಆರ್. ಪೇಟೆ ತಾಲ್ಲೂಕಿನ ಕೋಟಹಳ್ಳಿ ಗ್ರಾಮದಲ್ಲಿ ನಡೆದಿದೆ. ಬಸವರಾಜು(40) ಮೃತ ರೈತ ಎನ್ನಲಾಗಿದ್ದು, ರೈತ ಬಸವರಾಜು ಅವರು ತಮ್ಮ ಗದ್ದೆಯಲ್ಲಿ ಆಳುಗಳನ್ನು ಬಿಟ್ಟು ಕೆಲಸ ಮಾಡಿಸುತ್ತಿದ್ದರು. ಈ ವೇಳೆ ಬಸವರಾಜು ಅವರು ಕಾರ್ಮಿಕರಿಗೆ 500ರೂ ಕೂಲಿ ನೀಡುವುದಾಗಿ ತಿಳಿಸಿದ್ದು, ಅದರಲ್ಲಿ 400 ರೂ ಮಾತ್ರ ಹಣ ನೀಡಿ ಬಾಕಿ ಹಣವನ್ನು ಸಂಜೆ ನೀಡುವುದಾಗಿ ತಿಳಿಸಿದ್ದರು. ಈ ವೇಳೆ ಅಂಗಡಿ ಬಳಿ ಬಸವರಾಜು ಅವರನ್ನು ಕಾರ್ಮಿಕ ಭೇಟಿಯಾಗಿ ಬಾಕಿ ಹಣವನ್ನು ನೀಡುವುದಾಗಿ ಕೇಳಿದ್ದರು. ಆದರೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಕೈ-ಕೈ ಮಿಲಾಯಿಸಿದರು. ಈ ವೇಳೆ ಕೋಪಗೊಂಡ ಕಾರ್ಮಿಕ ಅಲ್ಲೇ ಪಕ್ಕದಲ್ಲಿ ನಿಲ್ಲಿಸಿದ್ದ ಲಾರಿಯಲ್ಲಿದ್ದ ಕಬ್ಬಿನ ಜಲ್ಲೆಯಿಂದ ಬಸವರಾಜು ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆಯಿಂದ ಗಂಭೀರ ಗಾಯಗೊಂಡ ಬಸವರಾಜು ಅವರನ್ನು ಗ್ರಾಮಸ್ಥರು ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ಆರೋಪಿ ತಲೆಮರೆಸಿಕೊಂಡಿದ್ದು, ಈ ಕುರಿತು ಕಿಕ್ಕೇರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.










