15 ಮೆಟ್ರಿಕ್ ಟನ್ ಭಾರ ಹೊತ್ತು ಸಾಗುವ ವಾಹನಗಳ ನಿರ್ಬಂಧದ ಆದೇಶ ಅನುಷ್ಠಾನಕ್ಕೆ ತರುವಂತೆ ಒತ್ತಾಯ…

120
firstsuddi

ಚಿಕ್ಕಮಗಳೂರು : ಹದಿನೈದು ಮೆಟ್ರಿಕ್ ಟನ್‍ಗಿಂತ ಅಧಿಕ ಭಾರ ಹೊತ್ತು ಸಾಗುವ ವಾಹನಗಳ ಸಂಚಾರವನ್ನು ನಿರ್ಬಂಧಿಸುವಂತೆ ರಾಜ್ಯ ಉಚ್ಚನ್ಯಾಯಾಲಯ ಮಾಡಿರುವ ಆದೇಶವನ್ನು ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರುವಂತೆ ಕರ್ನಾಟಕ ಮಾಹಿತಿ ಹಕ್ಕು ಕಾರ್ಯಕರ್ತರ ಸಂಘಟನೆ ಜಿಲ್ಲಾಡಳಿತವನ್ನು ಒತ್ತಾಯಿಸಿದೆ.

ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಅವರನ್ನು ನಿನ್ನೆ ಭೇಟಿ ಮಾಡಿದ ಸಂಘಟನೆಯ ಪದಾಧಿಕಾರಿಗಳು ಈ ಸಂಬಂಧ ಮನವಿ ಸಲ್ಲಿಸಿದರು.

15 ಮೆಟ್ರಿಕ್ ಟನ್‍ಗಿಂತ ಅಧಿಕ ಭಾರ ಹೊತ್ತು ಸಂಚರಿಸುವ ವಾಹನಗಳಿಂದಾಗಿ ಜಿಲ್ಲೆಯ ಅದರಲ್ಲೂ ವಿಶೇಷವಾಗಿ ಮಲೆನಾಡಿನ ರಸ್ತೆಗಳು ಹಾಳಾಗುತ್ತಿವೆ, ಗುಂಡಿ, ಗೊಟರುಗಳು ಬಿದ್ದು ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿದೆ ಎಂದು ಆರೋಪಿಸಿದರು.

ತಮ್ಮ ಸಂಘಟನೆಯ ಮನವಿಗೆ ಸ್ಪಂದಿಸಿರುವ ರಾಜ್ಯ ಉಚ್ಚನ್ಯಾಯಾಲಯ 15 ಮೆಟ್ರಿಕ್ ಟನ್‍ಗಿಂತ ಅಧಿಕ ಭಾರ ಹೊತ್ತು ಸಾಗುವ ವಾಹನಗಳ ಸಂಚಾರವನ್ನು ನಿರ್ಬಂಧಿಸಿ ಹೊರಡಿಸಿರುವ ಆದೇಶವನ್ನು ಪಾಲಿಸುವಂತೆ ಸೂಚಿಸಿದ್ದರೂ ಅಧಿಕಾರಿಗಳು ಅದನ್ನು ಪಾಲಿಸುತ್ತಿಲ್ಲ ಎಂದು ದೂರಿದರು.

ಇದರಿಂದಾಗಿ ಅಧಿಕ ಭಾರಹೊತ್ತ ನೂರಾರು ವಾಹನಗಳು ಪ್ರತಿನಿತ್ಯ ಸಂಚರಿಸುತ್ತಿವೆ ಎಂದ ಪದಾಧಿಕಾರಿಗಳು ಈ ಹಿನ್ನೆಲೆಯಲ್ಲಿ ನಿರ್ಬಂಧದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚಿಸುವಂತೆ ಆಗ್ರಹಿಸಿದರು.

ಕರ್ನಾಟಕ ಮಾಹಿತಿ ಹಕ್ಕು ಕಾರ್ಯಕರ್ತರ ಸಂಘದ ರಾಜ್ಯಾಧ್ಯಕ್ಷ ಸೋಮಾನಾಯಕ್, ಜಿಲ್ಲಾ ಉಪಾಧ್ಯಕ್ಷ ಸಮೀರ್, ಸದಸ್ಯರಾದ ಅಬ್ಸಲ್, ಫೈರೋಜ್ ಹಾಜರಿದ್ದರು.