21 ವರ್ಷದ ಮಗಳ ಬಳಿ ಪ್ರೆಗ್ನೆನ್ಸಿ ಟೆಸ್ಟ್ ಕಿಟ್ ಪತ್ತೆ – ಆ್ಯಸಿಡ್ ಸುರಿದು ಕೊಲೆ ಮಾಡಿದ ಪೋಷಕರು!

81
firstsuddi

ಲಕ್ನೋ : ಮಗಳ ಬಳಿ ಪ್ರೆಗ್ನೆನ್ಸಿ ಟೆಸ್ಟ್ ಕಿಟ್ ಇರುವುದನ್ನು ನೋಡಿ ಆಕೆಯ ಪೋಷಕರು ಆಕೆ ಅಕ್ರಮ ಸಂಬಂಧ ಹೊಂದಿದ್ದಾಳೆಂದು ಶಂಕಿಸಿ, ಕ್ರೂರವಾಗಿ ಕೊಂದಿರುವ ಘಟನೆ ಉತ್ತರ ಪ್ರದೇಶದ ಕೌಶಂಬಿಯ ಟೆನ್ ಷಾ ಅಲಮಾಬಾದ್ ಗ್ರಾಮದಲ್ಲಿ ನಡೆದಿದೆ.

ನರೇಶ್ ಹಾಗೂ ಆತನ ಪತ್ನಿ ಶೋಭಾದೇವಿ ಸೇರಿ ತಮ್ಮ 21 ವರ್ಷದ ಮಗಳ ಮೇಲೆ ಆ್ಯಸಿಡ್ ಸುರಿದು ಕೊಲೆ ಮಾಡಿದ್ದಾರೆ. ಈ ಕೊಲೆಗೆ ಸಂಬಂಧಿಕರಿಬ್ಬರು ಸಹಾಯ ಪಡೆದಿದ್ದಾರೆ. ಫೆಬ್ರವರಿ 3 ರಂದು ನರೇಶ್ ತಮ್ಮ ಮಗಳು ಕಾಣೆಯಾಗಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಘಟನೆಗೆ ಸಂಬಂಧಿಸಿ ಪ್ರಕರಣ ಕೈಗೊಂಡ ಪೊಲೀಸರು ತನಿಖೆ ಆರಂಭಿಸಿದ್ದರು. ಈ ವೇಳೆ ಗ್ರಾಮದ ಹೊರಗಿನ ಕಾಲುವೆಯಲ್ಲಿ ಆಕೆಯ ದೇಹವನ್ನು ವಿರೂಪಗೊಳಿಸಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಈ ಬಗ್ಗೆ ನರೇಶ್ ಹಾಗೂ ಶೋಭಾದೇವಿಯನ್ನು ತನಿಖೆಗೆ ಒಳಪಡಿಸಿದಾಗ ಸತ್ಯಾಂಶ ಬಯಲಾಗಿದೆ. ಮಗಳು ಅನೇಕ ಹುಡುಗರೊಂದಿಗೆ ಫೋನ್ ನಲ್ಲಿ ಮಾತನಾಡುತ್ತಿದ್ದಳು. ಅಷ್ಟೇ ಅಲ್ಲದೇ ಆಕೆಯ ಬಳಿ ಕೆಲವು ಪ್ರೆಗ್ನೆನ್ಸಿ ಟೆಸ್ಟ್ ಕಿಟ್ ಗಳು ಪತ್ತೆ ಆಗಿತ್ತು. ಇದರಿಂದಾಗಿ ಆಕೆ ಯಾವುದೋ ಹುಡುಗನೊಂದಿಗೆ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿ ಕೊಲೆ ಮಾಡಿರುವುದಾಗಿ ಪೊಲೀಸರಿಗೆ ನರೇಶ್ ತಿಳಿಸಿದ್ದಾನೆ.

ಗುರುತು ಮರೆಮಾಚಲು ದೇಹದ ಮೇಲೆ ಬ್ಯಾಟರಿ ಆ್ಯಸಿಡ್ ಸುರಿದಿದ್ದಾರೆ. ನರೇಶ್ ಅವರ ಇಬ್ಬರು ಸಹೋದರರಾದ ಗುಲಾಬ್ ಮತ್ತು ರಮೇಶ್ ಕೂಡ ಸಹಾಯ ಮಾಡಿದ್ದು, ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಬ್ರಿಜೇಶ್ ಕುಮಾರ್ ಶ್ರೀವಾಸ್ತವ ಹೇಳಿದ್ದಾರೆ.