ಬೆಂಗಳೂರು : ವ್ಯಾಕ್ಸಿನ್ ಒದಗಿಸದ ರಾಜ್ಯ ಸರ್ಕಾರವನ್ನು ಹೈ ಕೋರ್ಟ್ ತರಾಟೆಗೆ ತೆಗೆದುಕೊಂಡಿದ್ದು, 31 ಲಕ್ಷ ಜನರಿಗೆ ವ್ಯಾಕ್ಸಿನ್ ಯಾವಾಗ ಒದಗಿಸುತ್ತೀರಾ? ಲಸಿಕೆ ಒದಗಿಸಲು ನಿಮ್ಮಿಂದಾಗದಿದ್ದರೆ ಹೇಳಿ, ನಾವು ನಿಮ್ಮಿಂದ ಸಾಧ್ಯವಿಲ್ಲ ಎಂದೇ ಆದೇಶದಲ್ಲಿ ದಾಖಲಿಸುತ್ತೇವೆ ಎಂದು ಹೈಕೋರ್ಟ್ ತಿಳಿಸಿದೆ.
ರಾಜ್ಯದಲ್ಲಿ 6 ಕೋಟಿಗೆ ಹೆಚ್ಚು ಜನಸಂಖ್ಯೆ ಇದೆ. ನೀವು ಒಂದು ಪರ್ಸೆಂಟ್ ಜನಕ್ಕೂ ವ್ಯಾಕ್ಸಿನ್ ಒದಗಿಸಿಲ್ಲ. 1ನೇ ಡೋಸ್ ತೆಗೆದುಕೊಂಡವರಿಗೆ 2ನೇ ಡೋಸ್ ಸಿಕ್ಕಿಲ್ಲ, 2ನೇ ಡೋಸ್ ತೆಗೆದುಕೊಳ್ಳುವುದು ಜನರ ಹಕ್ಕಲ್ಲವೇ? 26 ಲಕ್ಷ ಜನರಿಗೆ ವ್ಯಾಕ್ಸಿನ್ ಕೊರತೆಯಿದೆ. ಈ ಗ್ಯಾಪ್ ಹೇಗೆ ಸರಿಪಡಿಸುತ್ತೀರಿ?. ಇದು ನಿಮ್ಮ ವ್ಯಾಕ್ಸಿನೇಷನ್ ಕಾರ್ಯಕ್ರಮದ ರೀತಿಯೇ? ಎಂದು ಸರ್ಕಾರವನ್ನು ತರಾಟೆ ತೆಗೆದುಕೊಂಡಿದೆ. 2 ದಿನಗಳಲ್ಲಿ ವ್ಯಾಕ್ಸಿನೇಷನ್ ಮಾಡುವಂತೆ ಆದೇಶಿಸಬೇಕಾಗುತ್ತದೆ ಎಂದು ಸರ್ಕಾರಕ್ಕೆ ಹೈಕೋರ್ಟ್ ವಿಭಾಗೀಯ ಪೀಠ ಎಚ್ಚರಿಕೆ ನೀಡಿದೆ.
ಇನ್ನೂ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ ಹೈಕೋರ್ಟ್ 1ನೇ ಡೋಸ್ ತೆಗೆದುಕೊಂಡವರಿಗೆ 2ನೇ ಡೋಸ್ ಸಿಗುತ್ತಿಲ್ಲ. 26 ಲಕ್ಷ ಜನರಿಗೆ ವ್ಯಾಕ್ಸಿನ್ ಕೊರತೆಯಿದೆ. ಇದನ್ನು ಹೇಗೆ ಸರಿಪಡಿಸುತ್ತೀರಿ ಎಂದಾಗ ಇದಕ್ಕೆ ಉತ್ತರ ನೀಡಿದ ಕೇಂದ್ರ ಸರ್ಕಾರದ ಎಎಸ್ ಜಿ ಐಶ್ವರ್ಯಾ ಭಾಟಿ ಅವರು, ವ್ಯಾಕ್ಸಿನ್ ವಿಳಂಬವಾದರೆ 1ನೇ ಡೋಸ್ ವ್ಯರ್ಥವಾಗಲ್ಲ, ಕೋವ್ಯಾಕ್ಸಿನ್ 2ನೇ ಡೋಸ್ ಗೆ 6 ವಾರ ಕಾಲಾವಕಾಶವಿದೆ. ಕೋವಿಶೀಲ್ಡ್ ಗೆ 8 ವಾರ ಕಾಲಾವಕಾಶವಿದೆ. ಈ ಬಗ್ಗೆ ತಜ್ಞರ ಸಮಿತಿಯೂ ಕೂಡ ಪರಿಶೀಲನೆ ನಡೆಸುತ್ತಿದೆ. ಕಾಲಮಿತಿ ಹೆಚ್ಚಿಸುವ ಬಗ್ಗೆ 2 ದಿನದಲ್ಲಿ ಅಭಿಪ್ರಾಯ ತಿಳಿಸಲಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.










