40 ವರ್ಷದ ಸಿನಿ ಪಯಣವನ್ನು ನೆನಪಿಸಿಕೊಂಡು ನಟ ಜಗ್ಗೇಶ್ ಭಾವುಕ…

146
firstsuddi

ಬೆಂಗಳೂರು : ಸ್ಯಾಂಡಲ್‍ವುಡ್ ನಟ ನವರಸ ನಾಯಕ ಜಗ್ಗೇಶ್ ಅವರು ಸ್ಯಾಂಡಲ್‍ವುಡ್ ಪ್ರವೇಶಿಸಿ 40 ವರ್ಷ ಕಳೆದಿದ್ದು, 40 ವರ್ಷದ ಸಿನಿ ಪಯಣವನ್ನು ನೆನಪಿಸಿಕೊಂಡು ಭಾವುಕರಾಗಿದ್ದಾರೆ. ನಗರದಲ್ಲಿ ಇಂದು ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸ್ಯಾಂಡಲ್‍ವುಡ್ ಪ್ರವೇಶಿಸಿದ ಆರಂಭದಲ್ಲಿ ತಾವು ಪಟ್ಟ ಕಷ್ಟಗಳನ್ನು ನೆನೆದು ಭಾವುಕರಾದರು. ಇದೇ ವೇಳೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರನ್ನು ನೆನೆದ ಅವರು, ನನ್ನ ಬದುಕಿಗೆ ಎರಡು ಚಿತ್ರಗಳು ದೊಡ್ಡ ಓಪನಿಂಗ್ ನೀಡಿದೆ. ಅದರಲ್ಲಿ ಶಿವಣ್ಣ ಅಭಿನಯದ ರಣರಂಗ ಸಿನಿಮಾ ಕೂಡಾ ಒಂದಾಗಿದೆ. ನಾನು ಗಣೇಶನ ದೇವಸ್ಥಾನಕ್ಕೆ ತೆರಳಿ ಪೂಜೆ ಮುಗಿಸಿ ಶಿವಣ್ಣ ಅವರ ಮನೆಗೆ ತೆರಳಿದ್ದೆ. ಆ ದಿನ ಶಿವಣ್ಣ ಅವರೇ ನನಗೆ ರಣರಂಗ ಸಿನಿಮಾದಲ್ಲಿ ಅವಕಾಶ ಮಾಡಿಕೊಟ್ಟರು ಎಂದು ನೆನಪಿಸಿಕೊಂಡರು.
ಇದೇ ವೇಳೆ ಅಂಬರೀಷ್ ಅವರನ್ನು ನೆನೆದ ಅವರು, ರೌಡಿ ಎಂಎಲ್‍ಎ ಸಿನಿಮಾ ಕ್ಲೈಮ್ಯಾಕ್ಸ್ ಚಿತ್ರೀಕರಣದ ವೇಳೆ ಅಂಬರೀಷ್ ಅವರು ಲೇ ಕರಿಯಾ ಹೀರೋ ಆಗು ಎಂದು ಹೇಳಿದ್ದರು. ನಾನು ನಾಯಕ ಆದೆ. ಆ ಸಿನಿಮಾದಲ್ಲಿ ಅಂಬರೀಷ್ ಅವರಿಗೆ ಗೆಸ್ಟ್ ರೋಲ್ ಮಾಡಿಸಿದ್ದೆ. ಅಲ್ಲದೇ ಆ ಸಿನಿಮಾವನ್ನು ನಾನೇ ನಿರ್ಮಾಣ ಮಾಡಿದ್ದೆ. ಆ ಸಮಯದಲ್ಲಿ ಮಗನ ಸ್ಕೂಲ್ ಫೀಸ್ ಕಟ್ಟಲು ಕಷ್ಟಪಡುತ್ತಿದ್ದೆ. ಆ ಬಳಿಕ ಒಂದು ದಿನ ಮಧ್ಯರಾತ್ರಿ 2 ಗಂಟೆಗೆ ಅಂಬರೀಷ್ ಅವರ ಮನೆಗೆ ಹೋಗಿದ್ದೆ. ಅಂದು ನನಗೆ ತುಂಬಾ ಬೈದು ಕಳುಹಿಸಿದ್ದರು. ಬಳಿಕ ಮಾಣಿಕ್ ಚಂದ್ ಎಂಬುವವರು ಕರೆ ಮಾಡಿ ಸಿನಿಮಾ ಮಾಡಿದ್ದೀರಂತೆ ಎಂದು ಹೇಳಿ ಅವರೇ ಕೈಯಿಂದ 5 ಲಕ್ಷ ಹಣವನ್ನು ಹಾಕಿ ಸಿನಿಮಾವನ್ನು ಬಿಡುಗಡೆ ಮಾಡಿದರು ಎಂದು ತಮ್ಮ ಸಿನಿ ಪಯಣವನ್ನು ನೆನಪಿಸಿಕೊಂಡು ಭಾವುಕರಾದರು.