5, 8ನೇ ತರಗತಿ ಬೋರ್ಡ್ ಪರೀಕ್ಷೆ – ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಗೆ ಮೇಲ್ಮನವಿ ಸಲ್ಲಿಕೆ…

34
firstsuddi

ನವದೆಹಲಿ : 5 ಮತ್ತು 8ನೇ ತರಗತಿಗಳಿಗೆ ಬೋರ್ಡ್ ಪರೀಕ್ಷೆ ನಡೆಸಲು ಅನುಮತಿ ನೀಡಿ ಹೈಕೋರ್ಟ್ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಅನುದಾನರಹಿತ ಖಾಸಗಿ ಶಾಲೆಗಳ ಸಂಘ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದೆ.

ಮಾರ್ಚ್ 27ರಿಂದ ಪರೀಕ್ಷೆಗಳು ಆರಂಭವಾಗಲಿದೆ. ಅಷ್ಟರೊಳಗೆ ಮೇಲ್ಮನವಿ ವಿಚಾರಣೆ ನಡೆಸುವಂತೆ ವಕೀಲರು ಮನವಿ ಮಾಡಿದ್ದಾರೆ. ಆದ್ರೆ ಸಿಜೆಐ ಡಿ.ವೈ.ಚಂದ್ರಚೂಡ್ ವಕೀಲರ ಮನವಿ ತಿರಸ್ಕರಿಸಿದ್ದು, ಮಾ. 27ರಂದು ವಿಚಾರಣೆ ನಡೆಸಲಾಗುವುದು ಎಂದು ಹೇಳಿದರು.

ವಾದ ಮುಂದುವರಿಸಿದ ವಕೀಲರು, ನಾವು 4,000 ಶಾಲೆಗಳನ್ನು ಪ್ರತಿನಿಧಿಸುತ್ತೇವೆ, ನಮ್ಮ ಅಭಿಪ್ರಾಯ ಕೇಳಬೇಕು ಎಂದು ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ಸಿಜೆಐ ಹೈಕೋರ್ಟ್ ಆದೇಶದಲ್ಲಿ ಮಧ್ಯಪ್ರವೇಶ ಮಾಡುವುದು ಬೇಡ. ರಾಜ್ಯದಲ್ಲಿ ಯಾವುದು ಉತ್ತಮವೆಂದು ಹೈಕೋರ್ಟ್ ಗೆ ಗೊತ್ತಿದೆ. ಮಾರ್ಚ್ 27 ರಂದೇ ನಿಮ್ಮ ಅಭಿಪ್ರಾಯ ಕೇಳಲಾಗುವುದು. ಯಾವುದೇ ಬದಲಾವಣೆ ಇಲ್ಲ ಎಂದರು.

ಪ್ರಸಕ್ತ ಶೈಕ್ಷಣಿಕ ವರ್ಷದಿಂದ 5 ಮತ್ತು 8ನೇ ತರಗತಿಗಳಿಗೆ ಪಬ್ಲಿಕ್ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ನಿರ್ಧರಿಸಿತ್ತು. ಇದನ್ನು ವಿರೋಧಿಸಿ ಪೋಷಕರ ಸಂಘಟನೆ ಕೋರ್ಟ್ ಮೊರೆ ಹೋಗಿತ್ತು. ಪೋಷಕರ ಮನವಿಗೆ ಸಮ್ಮತಿಸಿ 5 ಮತ್ತು 8ನೇ ತರಗತಿಯ ಮಕ್ಕಳಿಗೆ ಬೋರ್ಡ್ ಪರೀಕ್ಷೆ ನಡೆಸುವ ಬಗ್ಗೆ ಸರ್ಕಾರ ಹೊರಡಿಸಿದ್ದ ಸುತ್ತೋಲೆಯನ್ನು ಹೈಕೋರ್ಟ್ ನ ಏಕಸದಸ್ಯ ಪೀಠ ರದ್ದುಪಡಿಸಿತ್ತು. ಬಳಿಕ ಇದರ ವಿರುದ್ಧ ಶಿಕ್ಷಣ ಇಲಾಖೆ ಮೇಲ್ಮನವಿ ಸಲ್ಲಿಸಿತ್ತು. ನಂತರ ಏಕಸದಸ್ಯ ಪೀಠ ನೀಡಿದ್ದ ಆದೇಶಕ್ಕೆ ತಡೆ ನೀಡಿ ಬೋರ್ಡ್ ಪರೀಕ್ಷೆ ನಡೆಸಲು ಅನುಮತಿ ನೀಡಿ ಹೈಕೋರ್ಟ್ ತೀರ್ಪು ನೀಡಿತ್ತು.