ನವದೆಹಲಿ : ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ಪೌರತ್ವ ನೊಂದಾಣಿಯನ್ನು ವಿರೋಧಿಸಿ ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾರೂಪ ಪಡೆದುಕೊಂಡಿದೆ. ಕಳೆದ ಭಾನುವಾರದಿಂದ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ಸಂಭವಿಸಿ ನಿನ್ನೆ ಓರ್ವ ಹೆಡ್ ಕಾನ್ಸ್ಟೇಬಲ್ ಸೇರಿದಂತೆ 5 ಮಂದಿ ಮೃತಪಟ್ಟಿದ್ದರು. ಇಂದು ಮತ್ತೆ ಪ್ರತಿಭಟನೆ ಹಿಂಸಾರೂಪವನ್ನು ತಾಳಿದ್ದು, ಗುಂಪುಗಳ ನಡುವೆ ಕಲ್ಲು ತೂರಾಟ ಗಲಭೆ ನಡೆದ ಘಟನೆ ವರದಿಯಾಗಿದೆ. ನಿನ್ನೆ ನಡೆದ ಗಲಭೆಯಲ್ಲಿ ಗಂಭಿರವಾಗಿ ಗಾಯಗೊಂಡಿದ್ದ ಇಬ್ಬರು ಇಂದು ಮೃತಪಟ್ಟಿದ್ದು, ಸಾವಿನ ಸಂಖ್ಯೆ 7ಕ್ಕೆ ಏರಿಕೆಯಾಗಿದೆ.
ಪ್ರತಿಭಟನೆ ಹಿಂಸಾಚಾರ ತಾಳುತ್ತಿರುವ ಹಿನ್ನಲೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಧಿಕಾರಿಗಳ ಜೊತೆ ಸಭೆ ನಡೆಸಿದ್ದು, ಪರಿಸ್ಥಿತಿಯನ್ನು ತಿಳಿಗೊಳಿಸಲು ಭಾರತೀಯ ಸೇನೆಯ ಯೋಧರನ್ನು ಕರೆಸಿಕೊಳ್ಳುವ ಚಿಂತನೆ ನಡೆಯುತ್ತಿದೆ ಎನ್ನಲಾಗಿದೆ.










