ಮುಂಬೈ : ಮುಂಬೈನ ಮಾಟುಂಗಾ ಪ್ರದೇಶದಲ್ಲಿನ ಸರ್ಕಾರಿ ಶಾಲೆಯೊಂದರಲ್ಲಿ ಇಬ್ಬರು ಬಾಲಕರು ತಮ್ಮ 13 ವರ್ಷದ ಸಹಪಾಠಿ ಮೇಲೆ ತರಗತಿಯೊಳಗೆ ಅತ್ಯಾಚಾರವೆಸಗಿದ ಆರೋಪ ಕೇಳಿಬಂದಿದೆ. ಕಳೆದ ಸೋಮವಾರ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ತರಗತಿಯಲ್ಲಿದ್ದ ಇತರ ವಿದ್ಯಾರ್ಥಿಗಳು ನೃತ್ಯ ಅಭ್ಯಾಸಕ್ಕಾಗಿ ಹೊರಬಂದಾಗ ಆಕೆಯ ಇಬ್ಬರು ಸಹಪಾಠಿಗಳು ವಿದ್ಯಾರ್ಥಿನಿ ಮೇಲೆ ಪರಿಸ್ಥಿತಿಯ ಲಾಭ ಪಡೆದು ಈ ಕೃತ್ಯ ಎಸಗಿದ್ದಾರೆ ಎಂದು ಮಾಟುಂಗಾ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಘಟನೆಯ ನಂತರ ಬಾಲಕಿ ಆಘಾತಕ್ಕೀಡಾಗಿದ್ದು, ಅವಳು ತನ್ನ ಕುಟುಂಬ ಸದಸ್ಯರೊಂದಿಗೆ ತನ್ನ ಸಂಕಟವನ್ನು ಹೇಳಿಕೊಂಡಿದ್ದಾಳೆ. ಪೋಷಕರು ತಕ್ಷಣ ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದಾರೆ ಎಂದು ಅಧಿಕಾರಿ ಹೇಳಿದ್ದಾರೆ.
ದೂರಿನ ಆಧಾರದ ಮೇಲೆ ಪೊಲೀಸರು ವಿದ್ಯಾರ್ಥಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ(ಐಪಿಸಿ) ಸೆಕ್ಷನ್ 376ಡಿಎ (ಹದಿನಾರು ವರ್ಷದೊಳಗಿನ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ(ಪೋಕ್ಸೋ) ಕಾಯ್ದೆಯ ಸಂಬಂಧಿತ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.










