ಚಿಕ್ಕಮಗಳೂರು: ನಗರದ ರತ್ನಗಿರಿ ಬೋರೆಯಲ್ಲಿರುವ ಮಹಾತ್ಮಾ ಗಾಂಧಿ ಉದ್ಯಾನವನಕ್ಕೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದರ ಜೊತೆಗೆ ಅಭಿವೃದ್ದಿಪಡಿಸುವಂತೆ ವಾಯುವಿಹಾರಿಗಳು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಅವರನ್ನು ಇತ್ತೀಚೆಗೆ ಭೇಟಿ ಮಾಡಿದ ವಾಯುವಿಹಾರಿಗಳು ಈ ಸಂಬಂಧ ಮನವಿ ಸಲ್ಲಿಸಿದರು.ಉದ್ಯಾನವನದಲ್ಲಿರುವ ವಾಕಿಂಗ್ ಟ್ರ್ಯಾಕ್ , ಏರು ತಗ್ಗುಗಳಿಂದ ಕೂಡಿದೆ, ಪಾರ್ಕಿನಲ್ಲಿ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ವಾಯು ವಿಹಾರ ಮಾರ್ಗದಲ್ಲಿ ವಾಯು ವಿಹಾರಿಗಳಿಗೆ ವಿಶ್ರಾಂತಿ ಪಡೆಯಲು ಕುರ್ಚಿ ವ್ಯವಸ್ಥೆ ಇಲ್ಲದಿರುವುದರಿಂದಾಗಿ ಪರದಾಡುವಂತಾಗಿದೆ ಎಂದು ದೂರಿದರು.ಉದ್ಯಾನವನದ ಸುತ್ತ ಕಾಂಪೌಂಡ್ ಅಥವಾ ಬೇಲಿ ಇಲ್ಲದಿರುವುದರಿಂದಾಗಿ ಜಾನುವಾರುಗಳು ಮತ್ತು ನಾಯಿಗಳು ಪಾರ್ಕಿನ ಒಳಗಡೆ ಅಡ್ಡಾದಿಡ್ಡಿಯಾಗಿ ಓಡಾಡುತ್ತಿವೆ ಇದರಿಂದಾಗಿ ವಾಯುವಿಹಾರಿಗಳಿಗೆ ಭದ್ರತೆ ಇಲ್ಲದಂತಾಗಿದೆ ಎಂದರು.ಉದ್ಯಾನ ವನದಲ್ಲಿ ಮಾಡುತ್ತಿರುವ ವಾಕಿಂಗ್ ಟ್ರ್ಯಾಕ್ ನಿರ್ಮಾಣ ಕಾಮಗಾರಿ ಅವೈಜ್ಞಾನಿಕವಾಗಿದೆ, ಪಾದಚಾರಿ ಮಾರ್ಗಕ್ಕೆ ಅವೈಜ್ಞಾನಿಕವಾಗಿ ಸಿಮೆಂಟ್ ಇಂಟರ್‍ಲಾಕ್ ಬಾಕ್ಸ್ ಅಳವಡಿಸಲಾಗುತ್ತಿದೆ ಸಿಮೆಂಟ್ ಇಂಟರ್‍ಲಾಕ್ ಬಾಕ್ಸ್ ಅಳವಡಿಸಿದಲ್ಲಿ ಏರುತಗ್ಗುಗಳಿಂದ ಕೂಡಿರುವ ಟ್ರ್ಯಾಕ್‍ನಲ್ಲಿ ನಡೆಯುವ ವೇಳೆ ಮಂಡಿನೋವು ಬರುವುದರ ಜೊತೆಗೆ ವಾಯುವಿಹಾರಿಗಳು ಜಾರಿ ಬೀಳುವ ಅಪಾಯವಿದೆ ಎಂದು ಹೇಳಿದರು.
ಈ ಹಿನ್ನೆಲೆಯಲ್ಲಿ ಪಾದಚಾರಿ ಮಾರ್ಗಕ್ಕೆ ಸಿಮೆಂಟ್ ಇಂಟರ್‍ಲಾಕ್ ಬಾಕ್ಸ್ ಅಳವಡಿಸಬಾರದು, ಅದರ ಬದಲಿಗೆ ಜಿಲ್ಲಾ ಆಟದ ಮೈದಾನದಲ್ಲಿ ನಿರ್ಮಿಸಿರುವಂತೆ ಅರ್ಧ ಇಂಟರ್‍ಲಾಕ್ ಮತ್ತು ಇನ್ನರ್ಧ ಭಾಗ ಮಣ್ಣಿನಿಂದ ನಿರ್ಮಾಣ ಮಾಡಬೇಕು, ವಾಯುವಿಹಾರಿಗಳು ಮತ್ತು ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿ ಪಾರ್ಕನ್ನು ಅಭಿವೃದ್ದಿಪಡಿಸಬೇಕು ಎಂದು ಆಗ್ರಹಿಸಿದರು.ಉದ್ಯಾನವನದಲ್ಲಿ ಹಾಳಾಗಿ ಬಿದ್ದಿರುವ ಮಕ್ಕಳ ಆಟಿಕೆಗಳನ್ನು ಪುನರ್ ನಿರ್ಮಾಣ ಮಾಡಬೇಕು, ಪಾರ್ಕಿನ ಸುತ್ತ ಕಾಂಪೌಂಡ್ ಅಥವಾ ಬೇಲಿ ನಿರ್ಮಿಸಬೇಕು, ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ, ವಾಯುವಿಹಾರಿಗಳಿಗೆ ವಿಶ್ರಾಂತಿ ಪಡೆಯಲು ಪಾದಚಾರಿ ಮಾರ್ಗದಲ್ಲಿ ಸಿಮೆಂಟ್ ಕುರ್ಚಿಗಳ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.ಈರೇಗೌಡ, ಶ್ರೀಕಾಂತ್, ರಾಜು, ದೀಪು, ಶ್ರೀನಿವಾಸ್, ಮಲ್ಲಪ್ಪ, ಅಶೋಕ್, ಉದಯ್, ಶ್ರೀನಾಥ್ ಹಾಜರಿದ್ದರು.
Home ಸ್ಥಳಿಯ ಸುದ್ದಿ ರತ್ನಗಿರಿ ಬೋರೆಯಲ್ಲಿರುವ ಮಹಾತ್ಮಾ ಗಾಂಧಿ ಉದ್ಯಾನವನಕ್ಕೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದರ ಜೊತೆಗೆ ಅಭಿವೃದ್ದಿಪಡಿಸುವಂತೆ ಜಿಲ್ಲಾಧಿಕಾರಿಗೆ ಮನವಿ…










