ಬೆಂಗಳೂರು: ‘ಬಡವರ ಬಂಧು’ ಯೋಜನೆ ಉದ್ಘಾಟಿಸಿದ ನಂತರ ಮಾತನಾಡಿದ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ನಾನು ಇನ್ನು ಮುಂದೆ ಮಾಧ್ಯಮಗಳೊಂದಿಗೆ ಸುದ್ದಿಗೋಷ್ಠಿಯನ್ನು ನಡೆಸುವುದಿಲ್ಲ. ಸಮಾರಂಭಗಳ ವೇದಿಕೆಯಲ್ಲಿ ಮಾತ್ರ ಮಾತನಾಡುತ್ತೇನೆ ಮಾಧ್ಯಮಗಳ ಜೊತೆ ಪ್ರತ್ಯೇಕವಾಗಿ ಮಾತನಾಡುವುದಿಲ್ಲ. ಬೇಕಾದರೆ, ಬರೆದುಕೊಳ್ಳಿ, ಇಲ್ಲದಿದ್ದರೆ ಬಿಡಿ. ರೈತರ ಪರ ಕೆಲಸ ಮಾಡೋದು ನನಗೆ ಗೊತ್ತಿದೆ. ಬಿಜೆಪಿಯಿಂದ ಅದನ್ನು ಕಲಿಯಬೇಕಾಗಿಲ್ಲ. ಇತ್ತೀಚಿಗಿನ ದಿನಗಳಲ್ಲಿ ನಾನು ಏನು ಮಾತನಾಡಿದರೂ ತಪ್ಪು ತಿಳಿದುಕೊಳ್ಳುತ್ತಾರೆ. ಯಾವ ರೀತಿ ಮಾತನಾಡಬೇಕು ಗೊತ್ತಾಗುತ್ತಿಲ್ಲ. ಮುಖ್ಯಮಂತ್ರಿ ಸ್ಥಾನ ಶಾಶ್ವತವಲ್ಲ. ಕಾಂಗ್ರೆಸ್ ನವರು ಬೆಂಬಲ ಕೊಟ್ಟಿದ್ದಾರೆ. ದೇವರು ಎಷ್ಟು ದಿನ ಅವಕಾಶ ನೀಡುತ್ತಾರೋ ಅಷ್ಟು ದಿನ ಮುಖ್ಯಮಂತ್ರಿಯಾಗಿ ಕೆಲಸ ಮಾಡುತ್ತೇನೆ. ಬೀದಿ ಬದಿ ವ್ಯಾಪಾರಿಗಳಿಗಾಗಿ ಬಡವರ ಬಂಧು ಯೋಜನೆಯನ್ನು ಜಾರಿಗೊಳಿಸಲಾಗಿದ್ದು, ಬಡ್ಡಿ ಇಲ್ಲದೆ ನೀಡುವ ಸಾಲವನ್ನು ಸದುಪಯೋಗ ಪಡಿಸಿಕೊಳ್ಳಿ, ಸರಿಯಾಗಿ ಮರುಪಾವತಿ ಮಾಡಿದರೆ ದುಪ್ಪಟ್ಟು ಸಾಲಕ್ಕೆ ನೀವು ಅರ್ಹರಾಗುವಿರಿ ಎಂದು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಸಲಹೆ ನೀಡಿದ್ದಾರೆ.










