ಜಾಫರ್ ಷರೀಫ್ ಮತ್ತು ಅಂಬರೀಷ್ ಅವರಿಗೆ ಶ್ರದ್ದಾಂಜಲಿ ಸಲ್ಲಿಸಿದ ಜಿಲ್ಲಾ ಭಾರತ ಸೇವಾದಳದ ಪದಾಧಿಕಾರಿಗಳು…

215
firstsuddi

ಚಿಕ್ಕಮಗಳೂರು: ಇತ್ತೀಚೆಗೆ ನಿಧನರಾದ ಕೇಂದ್ರದ ಮಾಜಿ ಸಚಿವ ಜಾಫರ್ ಷರೀಫ್ ಮತ್ತು ಹಿರಿಯ ನಟ ಅಂಬರೀಷ್ ಅವರಿಗೆ ಜಿಲ್ಲಾ ಭಾರತ ಸೇವಾದಳದ ಪದಾಧಿಕಾರಿಗಳು ನಗರದಲ್ಲಿ ಮಂಗಳವಾರ ಶ್ರದ್ದಾಂಜಲಿ ಸಲ್ಲಿಸಿದರು.
ಸೇವಾದಳದ ಕಛೇರಿಯಲ್ಲಿ ಜಾಫರ್ ಷರೀಫ್ ಮತ್ತು ಅಂಬರೀಷ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಪದಾಧಿಕಾರಿಗಳು ಅವರ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷ ಮೌನಾಚರಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸೇವಾದಳದ ಜಿಲ್ಲಾ ಖಜಾಂಚಿ ಜಗಧೀಶಾಚಾರ್ ಭಾರತ ಸೇವಾದಳದ ಕೇಂದ್ರ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಜಾಫರ್ ಷರೀಫ್ ಅವರು ಅತ್ಯಂತ ಹಿರಿಯ ಮತ್ತು ಮುತ್ಸದ್ದಿ ರಾಜಕಾರಣಿಯಾಗಿದ್ದರು ಎಂದರು.
ನಾಡು, ನುಡಿ, ನೆಲ, ಜಲದ ಪರವಾಗಿದ್ದ ಹಿರಿಯ ನಟ ಅಂಬರೀಷ್ ಮತ್ತು ಜಾಫರ್ ಷರೀಪ್ ಅವರ ನಿಧನದಿಂದಾಗಿ ರಾಜ್ಯಕ್ಕೆ ತುಂಬಲಾರದ ನಷ್ಟವುಂಟಾಗಿದೆ ಎಂದು ಹೇಳಿದರು.
ಜಿಲ್ಲಾ ಕಾರ್ಯದರ್ಶಿ ಹಂಪಯ್ಯ ಮಾತನಾಡಿ ಭಾರತ ಸೇವಾದಳದ ಅಭಿವೃದ್ದಿಗೆ ಜಾಫರ್ ಷರೀಪ್ ಅವರ ಕೊಡುಗೆ ಅಪಾರವಾಗಿದೆ, ಅವರ ಮತ್ತು ಅಂಬರೀಷ್ ನಿಧನದಿಂದಾಗಿ ನಾಡು ಇಬ್ಬರು ಹಿರಿಯ ನಾಯಕರನ್ನು ಕಳೆದುಕೊಂಡಂತಾಗಿದೆ ಎಂದರು.
ಸೇವಾದಳದ ಜಿಲ್ಲಾ ಸಂಘಟಕ ಚಂದ್ರಕಾಂತ್, ನಿರ್ದೇಶಕರಾದ ಶಾಂತಕುಮಾರ್, ನಂಜುಂಡಪ್ಪ ಹಾಜರಿದ್ದರು.