ಚಿಕ್ಕಮಗಳೂರು: ಶೈಕ್ಷಣಿಕ ಸೇವೆಯಲ್ಲಿ 10 ದಶಕಗಳನ್ನು ಪೂರೈಸಿರುವ ತಾಲ್ಲೂಕಿನ ಹೊಸಹಳ್ಳಿಪೇಟೆಯ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ತನ್ನ ಶತಮಾನೋತ್ಸವವನ್ನು ಗುರುವಾರ ಸಡಗರ, ಸಂಭ್ರಮದಿಂದ ಆಚರಿಸಿಕೊಂಡಿತು.
1918 ರಲ್ಲಿ ಆರಂಭಗೊಂಡ ಈ ಶಾಲೆ ಕಳೆದ 10 ದಶಕಗಳಲ್ಲಿ ಸಾವಿರಾರು ಮಕ್ಕಳಿಗೆ ವಿದ್ಯಾದಾನ ಮಾಡಿದೆ, ಬಹಳಷ್ಟು ವರ್ಷಗಳ ಹಿಂದೆ ಸುತ್ತಮುತ್ತಲ ಗ್ರಾಮಗಳಲ್ಲಿ ಶಾಲೆಯಿಲ್ಲದ ಹಿನ್ನೆಲೆಯಲ್ಲಿ ಸುತ್ತಮುತ್ತಲ ಹಳ್ಳಿಗಳ ಎಲ್ಲಾ ಜಾತಿ, ಮತ ಮತ್ತು ಧರ್ಮಗಳ ಮಕ್ಕಳೂ ಈ ಶಾಲೆಗೆ ವಿದ್ಯಾಭ್ಯಾಸಕ್ಕೆ ಬರುತ್ತಿದ್ದರೆನ್ನಲಾಗಿದ್ದು, ಹಾಗಾಗಿ ಸರ್ವ ಧರ್ಮಿಯರಿಗೂ ಶಿಕ್ಷಣ ನೀಡಿದ ಹೆಗ್ಗಳಿಕೆಯನ್ನು ಈ ಶಾಲೆ ಹೊಂದಿದೆ.
ಹಿರಿಯ ವಿದ್ಯಾರ್ಥಿಗಳು, ನಿವೃತ್ತ ಶಿಕ್ಷಕರು ಗ್ರಾಮಸ್ಥರ ಸಂಭ್ರಮದ ನಡುವೆ ಜಿಲ್ಲಾ ಪಂಚಾಯಿತಿ ಸದಸ್ಯ ಹಿರಿಗಯ್ಯ ಗುರುವಾರ ಶತಮಾನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಗ್ರಾಮೀಣ ಭಾಗದ ಶಾಲೆಯೊಂದು 100 ವರ್ಷಗಳ ಸುಧೀರ್ಘ ಕಾಲ ಉಳಿದು ಶತಮಾನೋತ್ಸವವನ್ನು ಆಚರಿಸಿಕೊಳ್ಳುತ್ತಿರುವುದು ಅತ್ಯಂತ ಸಂತಸ ಹಾಗೂ ಹೆಮ್ಮೆಯ ಸಂಗತಿ ಎಂದರು.
ತಾಲ್ಲೂಕು ಪಂಚಾಯಿತಿ ಸದಸ್ಯೆ ಅರ್ಪಿತಾ ಪ್ರದೀಪ್ ಮಾತನಾಡಿ ಸಾವಿರಾರು ಮಕ್ಕಳ ಭವಿಷ್ಯವನ್ನು ರೂಪಿಸಿರುವ ಈ ಶಾಲೆ ಶತಮಾನೋತ್ಸವವನ್ನು ಕಂಡಿರುವುದು ಹೆಗ್ಗಳಿಕೆಯ ವಿಷಯವಾಗಿದೆ ಎಂದು ಹೇಳಿದರು.
ಶತಮಾನೋತ್ಸವದ ಅಂಗವಾಗಿ ಅದೇ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ ನಂತರ ಅದೇ ಶಾಲೆಯಲ್ಲಿ ಶಿಕ್ಷಕರಾಗಿ ನಿವೃತ್ತರಾದವರನ್ನು ಮತ್ತು ಶಾಲೆಯ ಬೆಳವಣಿಗೆಗೆ ಸಹಕರಿಸಿದವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ಇದೇ ವೇಳೆ ತಾಲ್ಲೂಕು ಮಟ್ಟದ ಉರ್ದು ಶಾಲಾ ಮಕ್ಕಳ ಪ್ರತಿಭಾ ಕಾರಂಜಿ ಕಾರ್ಯಕ್ರಮ ಜರುಗಿತು, ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷೆ ಜುಲೇಖಾ ಭಾನು ಅಧ್ಯಕ್ಷತೆ ವಹಿಸಿದ್ದರು.
ಮುಸ್ಲಿಂ ಸಮುದಾಯದ ಧರ್ಮ ಗುರುಗಳಾದ ಮಹಮ್ಮದ್ ಅಶ್ರಫ್ ರಜಾ, ಫಸಿ ಉರ್ ರೆಹಮಾನ್, ಅಂಜುಮನ್ ಇಸ್ಲಾಮಿಯ ಸಂಸ್ಥೆಯ ಉಪಾಧ್ಯಕ್ಷ ನಸ್ರತ್ ಅಲಿ, ಗ್ರಾ.ಪಂ. ಅಧ್ಯಕ್ಷೆ ಗಾಯತ್ರಿ, ಉಪಾಧ್ಯಕ್ಷೆ ವೇದಾವತಿ, ಸದಸ್ಯ ಪ್ರದೀಪ್, , ಮುಖ್ಯ ಶಿಕ್ಷಕ ಅಫ್ತಾಫ್ ಹುಸೇನ್, ಸುಲ್ತಾನ್ ಅಹಮದ್, ಡಾ|| ಸಹೇರಾ ಭಾನು, ಜಿ.ಪಂ. ಮಾಜಿ ಸದಸ್ಯ ಕೆ.ಟಿ.ಮಂಜುನಾಥ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪರಮೇಶ್, ಪ್ರಧಾನ ಕಾರ್ಯದರ್ಶಿ ಸುಂದರೇಶ್, ಸಂಘಟನಾ ಕಾರ್ಯದರ್ಶಿ ಮಹೇಶ್ವರಪ್ಪ, ಅಜ್ಜಯ್ಯ ಉಪಸ್ಥಿತರಿದ್ದರು.










