ಬಸವಣ್ಣನ ಚಿಂತನೆಗೆ ಬದ್ಧರಾಗಿ ಬದುಕಿದ ಡಾ.ಶ್ರೀ ಶಿವಕುಮಾರ ಸ್ವಾಮೀಜಿಗಳು ನನ್ನ ಆದರ್ಶ:ಸಿದ್ದರಾಮಯ್ಯ…

216
firstsuddi

ತುಮಕೂರು: ಬಸವ ತತ್ವಗಳಿಗೆ ಜೀವ ತುಂಬಿದ ತ್ರಿವಿಧ ದಾಸೋಹಿ, ಅಸಂಖ್ಯಾತ ಭಕ್ತರ ಬದುಕಿನ ಬೆಳಕು ನಡೆದಾಡುವ ದೇವರು, ಶತಾಯುಷಿ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಲಿಂಗೈಕ್ಯದಿಂದ ನಾಡಿನ ಜನತೆಗೆ ತೀವ್ರ ಆಘಾತ ಉಂಟಾಗಿದೆ.  ಕರ್ನಾಟಕ ರತ್ನ, ಕಾಯಕ ಯೋಗಿ, ದೇಶ ಮತ್ತು ಸಮಾಜದ ಪ್ರಗತಿಯ ಬಗ್ಗೆ ಕಳಕಳಿಯಿರುವ ಡಾ.ಶಿವಕುಮಾರ ಸ್ವಾಮೀಜಿ, ಮುಂದಿನ ಪೀಳಿಗೆಯ ಬೆಳವಣಿಗೆಗಾಗಿ ಪಣತೊಟ್ಟವರು. ಡಾ.ಶ್ರೀ ಶಿವಕುಮಾರ ಸ್ವಾಮಿಗಳ ಲಿಂಗೈಕ್ಯದಿಂದ ನಾನು ಆಘಾತಕ್ಕೀಡಾಗಿದ್ದೇನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದು:ಖತಪ್ತ ಮನಸ್ಸಿನಿಂದ ಪ್ರಾರ್ಥಿಸುತೇನೆ. ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ. 

  • ಇತ್ತೀಚಿನ ದಿನಗಳಲ್ಲಿ ಅವರ ಆರೋಗ್ಯದಲ್ಲಿ ನಡೆಯುತ್ತಿದ್ದ ಏರುಪೇರು ನಮ್ಮೆಲ್ಲರನ್ನೂ ಆತಂಕಕ್ಕೀಡುಮಾಡಿತ್ತು. ಇಂತಹದ್ದೊಂದು ದಿನ ಎದುರಾಗಬಹುದೆಂಬ ಭಯ ನಿಜವಾಗಿದೆ. ಸಾಧನೆಯ ಮೂಲಕ ಲೋಕವನ್ನೇ ಗೆದ್ದಿರುವ ಸ್ವಾಮಿಗಳು ಕೊನೆಗೂ ಸಾವನ್ನು ಗೆಲ್ಲಲಾಗದೆ ಶರಣಾಗಿ ನಮ್ಮನ್ನು ಅನಾಥರಾಗಿಸಿದ್ದಾರೆ.
  • ನಾವು ಯಾರೂ ಬಸವಣ್ಣನವರನ್ನು ಕಣ್ಣಾರೆ ನೋಡಿಲ್ಲ, ನಾನು ಡಾ.ಶ್ರೀ ಶಿವಕುಮಾರ ಸ್ವಾಮೀಜಿಗಳಲ್ಲಿ ಬಸವಣ್ಣನನ್ನು ಕಾಣುತ್ತಿದ್ದೆ. ಅವರನ್ನು ‘’ನಡೆದಾಡುವ ದೇವರು’’ ಎನ್ನುತ್ತಾರೆ. ನನ್ನ ಪಾಲಿಗೆ ಅವರು ‘’ನಡೆದಾಡುತ್ತಿದ್ದ ಬಸವಣ್ಣ’’ ಆಗಿದ್ದರು.
  • ವೈಯಕ್ತಿಕ ಮತ್ತು ರಾಜಕೀಯ ಜೀವನದಲ್ಲಿ ಬಸವಣ್ಣ ನನ್ನ ನಾಯಕ. ಇದಕ್ಕಾಗಿಯೇ ಬಸವಜಯಂತಿಯಂದೇ ನಾನು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದವನು. ಬಸವಣ್ಣನ ಚಿಂತನೆಗೆ ಬದ್ಧರಾಗಿ ಬದುಕಿದ ಡಾ.ಶ್ರೀ ಶಿವಕುಮಾರ ಸ್ವಾಮೀಜಿಗಳು ನನ್ನ ಆದರ್ಶ.
  • ಅನ್ನದಾಸೋಹ, ಮಕ್ಕಳಿಗೆ ಶಿಕ್ಷಣ ಮತ್ತು ವಸತಿ ಕಲ್ಪಿಸುವ ಜ್ಞಾನದಾಸೋಹದ ಸ್ವಾಮೀಜಿಯವರ ಬದುಕು ನಮಗೆಲ್ಲ ಮಾದರಿ. ಮುಖ್ಯಮಂತ್ರಿಯಾಗಿದ್ದಾಗ ನಾನು ಅನುಷ್ಠಾನಗೊಳಿಸಿದ್ದ ಅನ್ನಭಾಗ್ಯ, ಕ್ಷೀರಭಾಗ್ಯ, ವಿದ್ಯಾಸಿರಿ ಮೊದಲಾದ ಅನೇಕ ಕಾರ್ಯಕ್ರಮಗಳಿಗೆ ಸ್ವಾಮೀಜಿಯವರ ಸೇವೆ ಕೂಡಾ ಸ್ವೂರ್ತಿ.
  • ಸ್ವಾಮೀಜಿಗಳಿಗೆ ಶಿಕ್ಷಣ ಸೇವೆಯಾಗಿತ್ತೇ ಹೊರತು ಅದನ್ನು ವ್ಯಾಪಾರ-ಉದ್ಯಮ ಮಾಡಲು ಹೋಗಲೇ ಇಲ್ಲ. ಶಿಕ್ಷಣ ಕ್ಷೇತ್ರವೇ ಉದ್ಯಮವಾಗುತ್ತಿರುವ ಹಿನ್ನೆಲೆಯಲ್ಲಿ ಸ್ವಾಮೀಜಿಯವರ ಈ ಸಂದೇಶವನ್ನು ನಾವೆಲ್ಲರೂ ಅರಿತುಕೊಳ್ಳಬೇಕಾಗಿದೆ ಮತ್ತು ಶಿಕ್ಷಣೋದ್ಯಮಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ.
  • ಶ್ರೀ ಶಿವಕುಮಾರ ಸ್ವಾಮೀಜಿಗಳು ಎಂದೂ ಹೆಚ್ಚು ಮಾತನಾಡಿದವರಲ್ಲ, ಮಾತಿಗಿಂತ ಮೌನದಲ್ಲಿಯೇ ಸಾಧನೆ ಮಾಡಿದವರು, ನುಡಿದಂತೆಯೇ ನಡೆದವರು. ಕಾಯಕಪ್ರಜ್ಞೆಯನ್ನು ಬಾಳಿ ಬದುಕಿದವರು.
  • ಶ್ರೀ‌ಶಿವಕುಮಾರ  ಸ್ವಾಮೀಜಿಯವರಿಗೆ  ಭಾರತ ರತ್ನ ನೀಡಬೇಕೆಂದು  ಮುಖ್ಯಮಂತ್ರಿಯಾಗಿದ್ದಾಗ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದೆ. ಸ್ವಾಮೀಜಿಗಳು ಇಂತಹ ಪ್ರಶಸ್ತಿ-ಪಾರಿತೋಷಕಗಳನ್ನು ಮೀರಿ ಬದುಕಿದವರು. ಆದರೆ ಆ ಗೌರವ ಸ್ವಾಮೀಜಿಯವರಿಗೆ ಸಂದಿದ್ದರೆ ಆ ಪ್ರಶಸ್ತಿಯ ಗೌರವ ಹೆಚ್ಚಾಗುತ್ತಿತ್ತು.
  • ತುಮಕೂರಿನ ಸಿದ್ದಗಂಗಾ ಮಠ ಶ್ರೀ ಶಿವಕುಮಾರ ಸ್ವಾಮೀಜಿಗಳ ನೇತೃತ್ವದಲ್ಲಿ ಒಂದು ಸರ್ಕಾರ ಮಾಡಬೇಕಾಗಿರುವ ಕೆಲಸವನ್ನು ಮಾಡುತ್ತಾ ಬಂದಿದೆ. ಅಲ್ಲಿನ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣ ಪಡೆದು ವಿವಿಧ ಕ್ಷೇತ್ರಗಳಲ್ಲಿ ಉನ್ನತ ಹುದ್ದೆಗಳಲ್ಲಿರುವವರು ವಿಶ್ವದಾದ್ಯಂತ ಇದ್ದಾರೆ  ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು  ತಿಳಿಸಿದ್ದಾರೆ.