ಚಿಕ್ಕಮಗಳೂರು: ದಾನ, ಧರ್ಮ ಮತ್ತು ಸೇವೆಯ ಮುಖಾಂತರ ಮನುಷ್ಯರು ತಮ್ಮ ಬದುಕನ್ನು ಸಾರ್ಥಕಪಡಿಸಿಕೊಳ್ಳಬೇಕು ಎಂದು ಆದಿಚುಂಚನಗಿರಿ ಶೃಂಗೇರಿ ಶಾಖಾ ಮಠದ ಶ್ರೀ ಗುಣನಾಥ ಸ್ವಾಮೀಜಿ ಸಲಹೆ ಮಾಡಿದರು.
ಅಂತರಾಷ್ಟ್ರೀಯ ಲಯನ್ಸ್ ಸಂಸ್ಥೆಗಳ ಒಕ್ಕೂಟ. ಲಯನ್ಸ್ ಮತ್ತು ಲಯನೆಸ್ ಸಂಸ್ಥೆ. ಮುಕ್ತಿಧಾಮ ಸಮಿತಿ ನವೀಕರಿಸಿರುವ ನಗರದ ಮುಕ್ತಿಧಾಮ ಚಿತಾಗಾರವನ್ನು ಸೋಮವಾರ ಲೋಕಾರ್ಪಣೆ ಮಾಡಿ ನಂತರ ಲಯನ್ಸ್ ಸೇವಾ ಭವನದಲ್ಲಿ ನಡೆದ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.
ನಮ್ಮ ಶರೀರದೊಳಗೆ ಆತ್ಮರೂಪನಾಗಿರುವ ಶಿವ ಅಲ್ಲಿಂದ ನಿರ್ಗಮಿಸಿದರೆ ನಾವು ಶವವಾಗುತ್ತೇವೆ ಆಗ ನಾವು ಗಳಿಸಿದ ಆಸ್ತಿ, ಅಂತಸ್ತು, ಅಧಿಕಾರ, ಹಣ, ಹೆಂಡತಿ, ಮಕ್ಕಳು, ಬಂಧು-ಬಳಗ ಯಾವುವೂ ನಮ್ಮ ಹಿಂದೆ ಬರುವುದಿಲ್ಲ ಎಂದರು.
ನಾವು ದೇಹ ತೊರೆದು ಹೋಗುವಾಗ ನಾವು ಜೀವಿತಾವಧಿಯಲ್ಲಿ ಮಾಡಿದ ದಾನ-ಧರ್ಮ, ಪುಣ್ಯ ಮಾತ್ರ ನಮ್ಮ ಜೊತೆಗಿರುತ್ತದೆ ಎಂದ ಅವರು ಎಲ್ಲರೂ ಇದನ್ನು ಅರಿತು ಪುಣ್ಯ ಸಂಗ್ರಹವಾಗುವ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಸಿ.ಟಿ.ರವಿ ಸಮಾಜಮುಖಿ ಚಿಂತನೆ ಕಣ್ಮೆರೆಯಾಗುತ್ತಿರುವ ಇಂದಿನ ಸನ್ನಿವೇಶದಲ್ಲಿ ಮುಕ್ತಿಧಾಮವನ್ನು ನವೀಕರಿಸಿರುವಂತಹ ಪುಣ್ಯದ ಕಾರ್ಯ ನಡೆದಿರುವುದು ಸಂತಸದ ಸಂಗತಿ ಎಂದರು.
ಅತ್ಯಾಧುನಿಕ ಶವ ದಹನದ ಒಲೆಯನ್ನು ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಬ್ಯಾಂಕ್‍ನ ವ್ಯವಸ್ಥಾಪಕ ನಿರ್ದೇಶಕ ಎಂ.ಎಸ್.ಮಹಾಬಲೇಶ್ವರ ಮನುಷ್ಯರಲ್ಲಿ ಸಮಾಜಮುಖಿ ಚಿಂತನೆ ಹೆಚ್ಚಾಗಬೇಕು ಎಂದು ಸಲಹೆ ಮಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಲಯನ್ಸ್ ಜಿಲ್ಲಾ ಮಾಜಿ ರಾಜ್ಯಪಾಲ ಹೆಚ್.ಆರ್.ಹರೀಶ್ ಮತ್ತು ಮುಕ್ತಿಧಾಮ ಸಮಿತಿ ಅಧ್ಯಕ್ಷ ಬಿ.ಹೆಚ್.ನರೇಂದ್ರ ಪೈ ಚಿತಾಗಾರದ ನವೀಕರಣಕ್ಕೆ ಸಹಕರಿಸಿದ ದಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು.
ಚಿತಾಗಾರದಲ್ಲಿ ನೂತನವಾಗಿ ನಿರ್ಮಿಸಲಾದ ಶ್ರಾದ್ದ ಭವನವನ್ನು ಲೈಫ್ ಲೈನ್ ಫೀಡ್ಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕಿಶೋರ್ ಕುಮಾರ್ ಹೆಗ್ಗಡೆ. ಉದ್ಯಾನವನದ ಉದ್ಘಾಟನೆಯನ್ನು ರಾಜಸ್ಥಾನ್ ವಿಷ್ಣು ಸಮಾಜದ ಅಧ್ಯಕ್ಷ ಕಾಲೂಸಿಂಗ್ ಹಾಗೂ ಕಾವಲುಗಾರರ ಗೃಹವನ್ನು ಲಯನ್ಸ್ ಜಿಲ್ಲಾ ರಾಜ್ಯಪಾಲ ದೇವದಾಸ್ ಭಂಡಾರಿ ಲೋಕಾರ್ಪಣೆ ಮಾಡಿದರು.
ಕಾಶ್ಮೀರದಲ್ಲಿ ಇತ್ತೀಚೆಗೆ ನಡೆದ ಉಗ್ರಗಾಮಿ ಕೃತ್ಯದಲ್ಲಿ ಹುತಾತ್ಮರಾದ ಯೋಧರ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು. ಚಿತಾಗಾರದ ನವೀಕರಣಕ್ಕೆ ದೇಣಿಗೆ ನೀಡಿದ ದಾನಿಗಳನ್ನು ಸನ್ಮಾನಿಸಲಾಯಿತು.
ಲಯನ್ಸ್ ಅಧ್ಯಕ್ಷ ಸಿ.ಪಿ.ಸುರೇಶ್ ಅಧ್ಯಕ್ಷತೆ ವಹಿಸಿದ್ದರು, ಉಪರಾಜ್ಯಪಾಲ ಡಾ|| ಗೀತಾ ಪ್ರಕಾಶ್, ರಾಜ್ಯಪಾಲರ ಜಿಲ್ಲಾ ಪ್ರತಿನಿಧಿ ಹೆಚ್.ಸಿ.ಶಶಿಪ್ರಸಾದ್, ದೇವಿಚಂದ್ ಜೈನ್, ವಸಂತಶೆಟ್ಟಿ, ಗೌತಮ್ಮ ಚಂದ್, ದಾಕ್ಷಾಯಿಣಿ ಶ್ರೀನಿವಾಸ್, ಡಾ|| ಸಿ.ಕೆ.ಸುಬ್ರಾಯ, ಲಯನೆಸ್ ಅಧ್ಯಕ್ಷೆ ಲಕ್ಷ್ಮೀ ನಂಜಯ್ಯ, ವಿಧಾನಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ, ಪ್ರೊ|| ಹೆಚ್.ಎಸ್.ಜಗದೀಶಪ್ಪ ಉಪಸ್ಥಿತರಿದ್ದರು.
Home ಸ್ಥಳಿಯ ಸುದ್ದಿ ದಾನ, ಧರ್ಮ ಮತ್ತು ಸೇವೆಯ ಮುಖಾಂತರ ಮನುಷ್ಯರು ತಮ್ಮ ಬದುಕನ್ನು ಸಾರ್ಥಕಪಡಿಸಿಕೊಳ್ಳಬೇಕು:ಶ್ರೀ ಗುಣನಾಥ ಸ್ವಾಮೀಜಿ…










