ಚಿಕ್ಕಮಗಳೂರು : ಭಗವಾನ್ ಶ್ರೀ ರಾಮಕೃಷ್ಣ ಪರಮಹಂಸರ 184ನೇ ಜನ್ಮ ದಿನಾಚರಣೆ ಇಲ್ಲಿನ ಆದಿಶಕ್ತಿನಗರದ ಶ್ರೀ ಶಾರದಾ ಮಠದಲ್ಲಿ ಶುಕ್ರವಾರ ಶ್ರದ್ದಾ ಭಕ್ತಿಯಿಂದ ನಡೆಯಿತು.
ಜನ್ಮ ದಿನದ ಪ್ರಯುಕ್ತ ಶ್ರೀ ಮಠದಲ್ಲಿ ಬೆಳಿಗ್ಗೆ ಮಂಗಳಾರತಿ, ವೇದಘೋಷ, ವಿಶೇಷ ಪೂಜೆ, ಅಲಂಕಾರ, ಶ್ರೀ ವಿಷ್ಣುಸಹಸ್ರನಾಮ ಪಾರಾಯಣ, ಶ್ರೀ ರಾಮಕೃಷ್ಣ ಮೂಲಮಂತ್ರ ಹೋಮ ಜರುಗಿತು.
ಭಕ್ತರಿಂದ ಸಾಮೂಹಿಕ ಸ್ತ್ರೋತ್ರ ಪಠಣ, ಭಜನೆ, ನಾಮ ಸಂಕೀರ್ತನೆ ನಡೆದವು, ಹೋಮದ ಪೂರ್ಣಾಹುತಿ ಮತ್ತು ಮಹಾಮಂಗಳಾರತಿ ನಂತರ ಸಾರ್ವಜನಿಕ ಅನ್ನಸಂತರ್ಪಣೆ ಜರುಗಿತು.
ಇದೇ ವೇಳೆ ನಡೆದ ಧಾರ್ಮಿಕ ಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀ ಮಠದ ಅಧ್ಯಕ್ಷೆ ಪ್ರವ್ರಾಜಿಕಾ ಶುಭವ್ರತ ಪ್ರಾಣಾ ಮಾತಾಜಿ, ಭಗವಾನ್ ಶ್ರೀ ರಾಮಕೃಷ್ಣ ಪರಮಹಂಸರು ಅತ್ಯಂತ ದಯಾಳು, ಭಕ್ತರ ಮೇಲೆ ಅವರಿಗೆ ಅಪಾರವಾದ ಕರುಣೆ ಮತ್ತು ಪ್ರೀತಿ ಇತ್ತು, ಸದಾಕಾಲ ಅವರು ಭಕ್ತರ ಉದ್ದಾರಕ್ಕಾಗಿ ಹಾತೊರೆಯುತ್ತಿದ್ದರು ಎಂದು ಹೇಳಿದರು.
ಭಗವಾನರ ಬದುಕು ಮತ್ತು ಸಂದೇಶಗಳ ಕುರಿತು ಉಪನ್ಯಾಸ ನೀಡಿದ ಕೆ.ಆರ್.ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈಧ್ಯಾಧಿಕಾರಿ ಡಾ|| ವಿದ್ಯಾಸಾಗರ್ ರಾಮಕೃಷ್ಣ ಪರಮಹಂಸರು ಕಾಳಿ ಮಾತೆಯನ್ನು ಸಾಕ್ಷಾತ್ಕಾರ ಮಾಡಿಕೊಂಡವರು, ಅವರು ಕೇವಲ ಸದ್ಬಕ್ತರನ್ನಷ್ಟೇ ಉದ್ದಾರ ಮಾಡಲಿಲ್ಲ, ದೀನರು, ದುರುಳರು, ದುಷ್ಟರು ಮತ್ತು ಸಮಾಜಕ್ಕೆ ಬೇಡವಾದವರನ್ನೂ ಕರುಣೆಯಿಂದ ಉದ್ದರಿಸಿದ ಮಹಾತ್ಮರು ಎಂದರು.
ಎಂಇಎಸ್ ಕಾಲೇಜಿನ ನಿರ್ದೇಶಕಿ ಜಯಶ್ರೀ ಜೋಷಿ ಮಾತನಾಡಿ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರನ್ನು ಜಗತ್ತಿಗೆ ಕೊಟ್ಟ ಮಹಾನ್ ಶಕ್ತಿ ರಾಮಕೃಷ್ಣ ಪರಮಹಂಸರು ಎಂದು ತಿಳಿಸಿದರು.
ಪ್ರವ್ರಾಜಿಕಾ ಅಜಿತ ಪ್ರಾಣಾ ಮಾತಾಜಿ, ಶಿವಪ್ರಿಯ ಪ್ರಾಣಾ ಮಾತಾಜಿ, ಬ್ರಹ್ಮಚಾರಿಣಿ ಡಾ|| ಅನ್ನಪೂರ್ಣ, ದಾನಿ ವಾಸಂತಿ ಹೆಗ್ಗಡೆ ಉಪಸ್ಥಿತರಿದ್ದರು, ಜನ್ಮ ದಿನದ ಪ್ರಯುಕ್ತ ನಗರ ಮತ್ತು ಸುತ್ತಮುತ್ತಲ ಗ್ರಾಮಗಳ ನೂರಾರು ಭಕ್ತರು ಬೆಳಗಿನಿಂದ ಸಂಜೆಯವರೆಗೆ ಶ್ರೀ ಮಠಕ್ಕೆ ತೆರಳಿ ಪೂಜೆ, ಪ್ರಾರ್ಥನೆ ಸಲ್ಲಿಸಿದರು.










