ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟ್ವಿಟ್ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಹಿಂದಿನ ನಮ್ಮ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಚಾಮರಾಜನಗರ ಜಿಲ್ಲೆಯ ಪ್ರತಿ ಕ್ಷೇತ್ರಕ್ಕೆ ಕನಿಷ್ಟ ರೂ.2000 ಕೋಟಿ ಅನುದಾನ ನೀಡಿದ್ದೆವು. ನಾವು ನಮ್ಮ ಸಾಧನೆಗಳು, ಯೋಜನೆಗಳ ಬಗ್ಗೆ ಮಾತ್ರ ಹೇಳುತ್ತೇವೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆ ಎಂದರೆ ಯುಪಿಎ ಯೋಜನೆಗಳ ಹೆಸರು ಬದಲಿಸಿ ತಮ್ಮದೇ ಸಾಧನೆ ಎಂಬಂತೆ ಬಿಂಬಿಸಿಕೊಳ್ಳುವುದು.
ನನ್ನ 40 ವರ್ಷಗಳ ಸುದೀರ್ಘ ರಾಜಕೀಯ ಜೀವನದಲ್ಲಿ ನರೇಂದ್ರ ಮೋದಿಯವರಂತೆ ಸುಳ್ಳು ಹೇಳುವ ಪ್ರಧಾನಿಯನ್ನೇ ಕಂಡಿಲ್ಲ. ಸ್ವಾತಂತ್ರ್ಯ ನಂತರ ಒಂದಾಗಿದ್ದ ಭಾರತೀಯ ಸಮಾಜವನ್ನು ಮತ್ತೆ ‘ಒಡೆದು ಆಳಲು’ ಬಿಜೆಪಿ ಪಕ್ಷ ಹಾತೊರೆಯುತ್ತಿದೆ. ಜಾತಿ-ಧರ್ಮಗಳ ನಡುವೆ ಹುಳಿಹಿಂಡಿ ಜನರನ್ನು ಪರಸ್ಪರ ಶತ್ರುಗಳನ್ನಾಗಿ ಮಾಡುತ್ತಿದೆ.
ಕಳೆದ 5 ವರ್ಷಗಳಲ್ಲಿ ಮೋದಿಯವರು ತಮ್ಮ ಭಾಷಣದಲ್ಲಿ ಒಂದು ಕಡೆಯಾದರೂ ತಾವು ನೀಡಿದ್ದ ಭರವಸೆಗಳೆಷ್ಟು ಮತ್ತು ಎಷ್ಟು ಈಡೇರಿಸಿದ್ದೇನೆ ಎಂದು ಹೇಳಿದ್ದಾರೆಯೇ? ಧರ್ಮ, ದೇವರು ಈ ವಿಚಾರಗಳನ್ನು ಬಿಟ್ಟು ಹೇಳಲು ಅವರಲ್ಲಿ ಬೇರೇನೂ ಇಲ್ಲ. ಜನರ ಭಾವನೆಗಳೇ ಅವರ ಬಂಡವಾಳ. ಇಂಥ ಕೀಳುಮಟ್ಟದ ರಾಜಕಾರಣ ಮಾಡಲು ಬಿಜೆಪಿ ಅವರಿಗೆ ನಾಚಿಕೆಯಾಗಬೇಕು.
ಸರ್ಜಿಕಲ್ ದಾಳಿಯನ್ನು ರಾಜಕೀಯ ಸ್ವಾರ್ಥ ಸಾಧನೆಗಾಗಿ ಬಳಸಿಕೊಳ್ಳುವುದು ದೇಶದ್ರೋಹದ ಕೆಲಸ. ಅದನ್ನೇ ಬಿಜೆಪಿ ಮಾಡುತ್ತಿದೆ. ಕಾಂಗ್ರೆಸ್ ಸರ್ಕಾರಗಳ ಆಡಳಿತದಲ್ಲಿ ಎರಡು ಬಾರಿ ಪಾಕಿಸ್ತಾನವನ್ನು ಯುದ್ಧದಲ್ಲಿ ಸೋಲಿಸಲಾಗಿತ್ತು, ಹತ್ತಾರು ಬಾರಿ ಸರ್ಜಿಕಲ್ ಸ್ಟ್ರೈಕ್ ಮಾಡಲಾಗಿತ್ತು. ಅದನ್ನು ನಾವು ಎಂದಾದರೂ ರಾಜಕೀಯಕ್ಕೆ ಬಳಸಿಕೊಂಡಿದ್ದೇವೆಯೇ?
ರಾಮ ಮಂದಿರ ನಿರ್ಮಾಣಕ್ಕೆ ನಮ್ಮ ವಿರೋಧವಿಲ್ಲ, ಆದರೆ ಅದನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದಕ್ಕೆ ಮಾತ್ರ ನಮ್ಮ ವಿರೋಧವಿದೆ. 1992 ರಿಂದ ಇವತ್ತಿನವರೆಗೂ ಪ್ರತಿ ಚುನಾವಣೆಯಲ್ಲಿಯೂ ರಾಮಮಂದಿರ ಕಟ್ಟುತ್ತೇವೆ, ಮತ ನೀಡಿ ಎಂದು ಜನರನ್ನು ಮೂರ್ಖರನ್ನಾಗಿಸುತ್ತಿದ್ದಾರೆ. ವಾಸ್ತವದಲ್ಲಿ ರಾಮಮಂದಿರ ನಿರ್ಮಾಣವಾಗುವುದು ಬಿಜೆಪಿಗೇ ಬೇಡವಾಗಿದೆ.
ಬಿಜೆಪಿ ರಾಮಮಂದಿರ ಕಟ್ಟಲು ಊರೂರು ಸುತ್ತಿ ಇಟ್ಟಿಗೆ, ಕಲ್ಲು ಮತ್ತು ಹಣ ಸಂಗ್ರಹಿಸಿತ್ತು. ಅಂದು ಸಂಗ್ರಹಿಸಿದ್ದ ಇಟ್ಟಿಗೆ, ಕಲ್ಲುಗಳು ಅಯೋಧ್ಯೆಯನ್ನು ಮುಟ್ಟಲೇ ಇಲ್ಲ. ಆದರೆ ಜನರು ಕೊಟ್ಟ ಹಣ ಮಾತ್ರ ಭದ್ರವಾಗಿ ಬಿಜೆಪಿಯವರ ಜೇಬು ಸೇರಿತ್ತು. ಇದುವರೆಗೂ ರಾಮ ಮಂದಿರ ಕಟ್ಟಲು ಸಂಗ್ರಹಿಸಿದ್ದ ಹಣದ ಲೆಕ್ಕ ಕೊಟ್ಟಿದ್ದಾರೆಯೇ? ಎಂದು ಟ್ವಿಟ್ ಮಾಡಿದ್ದಾರೆ.










