ಬೆಂಗಳೂರು : ಸಮ್ಮಿಶ್ರ ಸರ್ಕಾರದ ಕೆಲವು ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಮುಖಾಂತರ ಮೈತ್ರಿ ಸರ್ಕಾರವು ತಮ್ಮ ಸಂಖ್ಯಾಬಲವನ್ನು ಕಳೆದುಕೊಂಡಿದ್ದು, ಮೈತ್ರಿ ಪಕ್ಷದ ಕೆಲ ನಾಯಕರ ಬಿಜೆಪಿ ಸೇರ್ಪಡೆ ವಿಚಾರಕ್ಕೆ ಬಿಜೆಪಿಯ ಕೆಲವು ಕಾರ್ಯಕರ್ತರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ತಿಳಿದು ಬಂದಿದ್ದು, ಮಾಜಿ ಉಪಮೇಯರ್ ಆದ ಎಸ್. ಹರೀಶ್ ಅವರ ನೇತೃತ್ವದ ಬಿಜೆಪಿ ನಿಯೋಗ ಬಿಜೆಪಿ ರಾಷ್ಟ್ರಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ನಿವಾಸಕ್ಕೆ ತೆರಳಿ ಪತ್ರದ ಮೂಲಕ ತಮ್ಮ ಮನವಿಯನ್ನು ಸಲ್ಲಿಸಿದ್ದಾರೆ. ಮಹಾಲಕ್ಷ್ಮೀ ಲೇಔಟ್ನ ಶಾಸಕ ಕೆ.ಗೋಪಾಲಯ್ಯ ಅವರು ಸೇರಿದಂತೆ ವಿವಿಧ ನಾಯಕರ ಬಿಜೆಪಿ ಸೇರ್ಪಡೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ವೇಳೆ ಬಿ.ಎಸ್ ಯಡಿಯೂರಪ್ಪ ಅವರು ಕಾರ್ಯಕರ್ತರ ಮನವಿಯನ್ನು ಸ್ವೀಕರಿಸಿ ಈ ಬಗ್ಗೆ ಹೊರಗೆ ಮಾತನಾಡಬೇಡಿ, ಬಳಿಕ ಕುಳಿತು ಚರ್ಚಿಸೋಣ ಎಂದು ಕಾರ್ಯಕರ್ತರ ಮನವೊಲಿಸಿ ಕಳುಹಿಸಿದ್ದಾರೆ ಎನ್ನಲಾಗಿದೆ.










