ನಾನು ಹೆದರಿಕೊಂಡು ಹೋಗುವ ಕೆಂಪೇಗೌಡನ ಮಗನಲ್ಲ : ಡಿ.ಕೆ. ಶಿವಕುಮಾರ್.

234
firstsuddi

ಬೆಂಗಳೂರು : ಇಡಿ ಅಧಿಕಾರಿಗಳು ಸಮ್ಮನ್ಸ್ ಜಾರಿ ಮಾಡಿದ ಹಿನ್ನೆಲೆ, ವಿಚಾರಣೆಗೆ ಹಾಜರಾಗುವ ಮುನ್ನ ಸದಾಶಿವನಗರದ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಡಿ.ಕೆ. ಶಿವಕುಮಾರ್ ಅವರು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿ, ನಾಯಕನಾಗಿ ಪಕ್ಷ ನೀಡಿದ ಜವಾಬ್ದಾರಿಯನ್ನು ನಿಭಾಯಿಸಿದ್ದೇನೆ. ಗುಜರಾತಿನ ಶಾಸಕರನ್ನು ಹಾಗೂ ಮಹಾರಾಷ್ಟ್ರ ಶಾಸಕರನ್ನು ಕಾಪಾಡುವ ಜವಾಬ್ದಾರಿಯನ್ನು ನಾನು ನಿಭಾಯಿಸಿದ್ದೇನೆ. ನಾನು ಕಾನೂನಿಗೆ ಗೌರವ ಕೊಡುವ ಶಾಸಕ. ಎಲ್ಲವನ್ನೂ ಕಾನೂನಿನ ಚೌಕಟ್ಟಿನಲ್ಲೇ ಎದುರಿಸುತ್ತೇನೆ. ಕಾನೂನಿನ ಪ್ರಕಾರವೇ ಹೋರಾಡುತ್ತೇನೆ. ನನ್ನ 85 ವರ್ಷದ ತಾಯಿಗೆ ಇಬ್ಬರು ಮಕ್ಕಳು. ಒಬ್ಬ ಶಾಸಕನಾಗಿದ್ದಾನೆ, ಇನ್ನೊಬ್ಬ ಸಂಸದನಾಗಿದ್ದಾನೆ. ನಾನು ಬಡತನದಿಂದ ಬಂದವನೇನು ಅಲ್ಲ. ನಾನು ಮಧ್ಯಮ ವರ್ಗದ ಕುಟುಂಬದಿಂದ ಬಂದವನು. ನಮ್ಮ ತಾಯಿಯ ಆಸ್ತಿಯನ್ನೂ ಅವರು ಬೇನಾಮಿ ಆಸ್ತಿ ಎಂದು ಹೇಳುತ್ತಿದ್ದಾರೆ. ನನ್ನ ಸ್ನೇಹಿತರು ಮತ್ತು ಕುಟುಂಬಸ್ಥರ ಮನೆಯಲ್ಲಿ ಪತ್ತೆಯಾದ ಹಣವೆಲ್ಲಾ ನ್ನದೇ ಎಂದು ಹೇಳುತ್ತಿದ್ದಾರೆ. ಆದರೆ ನಾನು ನನ್ನ ಮನೆಯಲ್ಲಿ ಪತ್ತೆಯಾದ ಹಣ ನನ್ನದೇ ಎಂದು ಹೇಳುತ್ತೇನೆ. ನಾನು ಲಂಚ ಪಡೆದಿಲ್ಲ, ಕೊಲೆಯೂ ಮಾಡಿಲ್ಲ. ನನ್ನ ಮನೆಯಲ್ಲಿ ಪತ್ತೆಯಾದ ಹಣವೆಲ್ಲಾ ನಾನೇ ಸಂಪಾದಿಸಿದ್ದೇನೆ. ಇದಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ನಾನು ಸಲ್ಲಿಸಿದ್ದೇನೆ. ನಾನು ಹೆದರಿಕೊಂಡು ಹೋಗುವ ಕೆಂಪೇಗೌಡನ ಮಗನಲ್ಲ. ನಾನು ಕಾನೂನಾಗಿ, ರಾಜಕೀಯವಾಗಿ ಹಾಗೂ ಸಾಮಾಜಿಕವಾಗಿ ಎದುರಿಸುತ್ತೇನೆ. ನಮ್ಮ ಮನೆಗಳಲ್ಲಿ ಸಿಕ್ಕ ಹಣದ ಬಗ್ಗೆ ನಾವು ಸಾಕ್ಷಿ ಕೊಡುತ್ತೇವೆ. ಆದರೆ ಬಿಜೆಪಿ ಆಪರೇಷನ್ ಮಾಡಿದಾಗ ಕೋಟಿಗಟ್ಟಲೆ ಹಣದ ವ್ಯವಹಾರ ಮಾಡಿರುವ ಬಗ್ಗೆ ಯಾಕೆ ಯಾರು ಪ್ರಶ್ನಿಸಿಲ್ಲ. ಅವರಿಗೆ ಯಾಕೆ ನೋಟಿಸ್ ಕೊಟ್ಟಿಲ್ಲ. ಸದನದಲ್ಲಿ ಬಹಿರಂಗವಾಗಿಯೇ ಬಿಜೆಪಿ ಕೋಟಿಗಟ್ಟಲೇ ಹಣದ ಆಮಿಷ ಒಡ್ಡಿರುವ ಬಗ್ಗೆ ನಮ್ಮ ನಾಯಕರು ಹೇಳಿದ್ದಾರೆ. ಆದರೂ ಬಿಜೆಪಿ ಮೇಲೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಒಬ್ಬರಿಗೆ ಒಂದು ನ್ಯಾಯ, ಇನ್ನೊಬ್ಬರಿಗೆ ಒಂದು ನ್ಯಾಯ. ನಾನು ಯಾವುದಕ್ಕೂ ಹೆದರಲ್ಲ. ನಾನು ತಪ್ಪು ಮಾಡಿಲ್ಲ. ಇಡಿ ನೊಟಿಸ್‍ಗೆ ಗೌರವಿಸುತ್ತೇನೆ, ಅದಕ್ಕೆ ಉತ್ತರ ಕೂಡ ನೀಡುತ್ತೇನೆ ಎಂದರು.