ಚಿಕ್ಕಮಗಳೂರು : ಕೊಪ್ಪಳದ ಹಾಲ್ಕುರಿಕೆ ರಂಗಭೂಮಿ ಸಂಸ್ಥೆ ವತಿಯಿಂದ ನಾಟಕ ಪ್ರದರ್ಶನ…

313
firstsuddi

ಚಿಕ್ಕಮಗಳೂರು : ಪದವಿಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ ಕೊಪ್ಪಳದ ಹಾಲ್ಕುರಿಕೆ ರಂಗಭೂಮಿ ಸಂಸ್ಥೆ ಹಮ್ಮಿಕೊಂಡಿರುವ ಎರಡು ದಿನಗಳ ಕಾಲದ “ಕಾಲೇಜು ರಂಗ ಪಯಣ 2019” ನಾಟಕ ಪ್ರದರ್ಶನ ನಗರದ ಕುವೆಂಪು ಕಲಾ ಮಂದಿರದಲ್ಲಿ ಬುಧವಾರ ಆರಂಭಗೊಂಡಿತು.
ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಲೋಕೇಶ್ ನಾಟಕ ಜೀವಂತ ಕಲೆ, ಸಿನಿಮಾ, ಮೊಬೈಲ್, ಕಂಪ್ಯೂಟರ್ ಮತ್ತು ಟಿ.ವಿಯ ಅಬ್ಬರದಲ್ಲಿ ಅದು ಕಣ್ಮರೆಯಾಗದಂತೆ ಕಾಪಾಡಿಕೊಳ್ಳುವುದು ಎಲ್ಲರ ಜವಾಬ್ದಾರಿ ಎಂದರು.
ಪದವಿಪೂರ್ವ ಕಾಲೇಜು ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಡಾ|| ಎಂ.ಡಿ.ಸುದರ್ಶನ್ ಮಾತನಾಡಿ ಪದವಿಪೂರ್ವ ಶಿಕ್ಷಣದ ಕನ್ನಡ ಬಾಷಾ ಪಠ್ಯಪುಸ್ತಕದ ನಾಟಕಗಳನ್ನು ಇಂದು ಮತ್ತು ನಾಳೆ ಪ್ರದರ್ಶಿಸಲಾಗುತ್ತಿದ್ದು, ವಿದ್ಯಾರ್ಥಿಗಳು ಅದರ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ರಂಗ ನಿರ್ದೇಶಕ ಹಾಲ್ಕುರಿಕೆ ಶಿವಶಂಕರ್ ವಿದ್ಯಾರ್ಥಿಗಳಲ್ಲಿ ಸಾಮಾನ್ಯ ಜ್ಞಾನ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವ ಉದ್ದೇಶದಿಂದ ತಮ್ಮ ಸಂಸ್ಥೆ ಕಳೆದ 7 ವರ್ಷಗಳಿಂದ ರಾಜ್ಯಾದ್ಯಂತ ನಿರಂತರವಾಗಿ ನಾಟಕಗಳನ್ನು ಪ್ರದರ್ಶಿಸುತ್ತಿದೆ ಎಂದು ತಿಳಿಸಿದರು.
ಇದೇ ವೇಳೆ ಹಾಲ್ಕುರಿಕೆ ರಂಗಭೂಮಿ ಕಲಾವಿದರು ಪ್ರದರ್ಶಿಸಿದ ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರ ನೀಳ್ಗತೆ ಕೃಷ್ಣೇಗೌಡರ ಆನೆ ನೋಡುಗರ ಮನ ಗೆದ್ದಿತು.
ಪದವಿಪೂರ್ವ ಕಾಲೇಜು ಪ್ರಾಚಾರ್ಯರ ಸಂಘದ ಜಿಲ್ಲಾಧ್ಯಕ್ಷ ಬಿ.ಆರ್.ಶ್ರೀನಿವಾಸಮೂರ್ತಿ ಉಪನ್ಯಾಸಕರಾದ ಹೆಚ್.ಟಿ.ಗಿರೀಶ್, ಹೇಮರಾಜ್, ಮಂಜುಳಾ ಉಪಸ್ಥಿತರಿದ್ದರು. ಸಾಹಿತಿ ಡಾ|| ಚಂದ್ರಶೇಖರ ಕಂಬಾರರ ಬೋಳೆ ಶಂಕರ ನಾಟಕದ ಪ್ರದರ್ಶನ ಗುರುವಾರ ನಡೆಯಲಿದೆ.