ಹೆಚ್.ಡಿ ದೇವೇಗೌಡರು ಹಾಗೂ ಹೆಚ್.ಡಿ ಕುಮಾರಸ್ವಾಮಿ ಅವರ ದೇಹ ಬಂಗಾರ, ಆದರೆ ಕಿವಿ ಮಾತ್ರ ಹಿತ್ತಾಳೆ : ಶಿವರಾಮೇಗೌಡ.

287
firstsuddi

ಮಂಡ್ಯ : ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಹಾಗೂ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರ ದೇಹ ಬಂಗಾರ, ಆದರೆ ಕಿವಿ ಮಾತ್ರ ಹಿತ್ತಾಳೆ ಎಂದು ಮಾಜಿ ಸಂಸದ ಶಿವರಾಮೇಗೌಡ ಅವರು ಹೇಳಿದ್ದಾರೆ. ಜಿಲ್ಲೆಯ ನಾಗಮಂಗಲದಲ್ಲಿ ಮಾತನಾಡಿದ ಅವರು, 20 ವರ್ಷ ಅಧಿಕಾರ ಸಿಗದ ನನಗೆ ಜೆಡಿಎಸ್ ಎಂಪಿ ಮಾಡಿದೆ. ಕುಮಾರಸ್ವಾಮಿ, ದೇವೇಗೌಡರು ಹಾಗೂ ನನ್ನ ನಡುವೆ ಯಾವುದೇ ಅಸಮಾಧಾನ ಇಲ್ಲ. ಸಣ್ಣ ಪುಟ್ಟ ಅಸಮಾಧಾನ ಇದ್ದರೆ ಸರಿಪಡಿಸಿಕೊಳ್ಳುತ್ತೇವೆ ಎಂದರು.
ದೊಡ್ಡವರಿಗೆ ನನ್ನ ಬಗ್ಗೆ ಏಕವಚನದಲ್ಲಿ ಮಾತನಾಡುವ ಅಧಿಕಾರ ಇದೆ. ಕೆಲ ಭಟ್ಟಂಗಿಗಳು ಕುಮಾರಸ್ವಾಮಿ ಅವರ ಬಳಿ ನನ್ನ ಬಗ್ಗೆ ಚಾಡಿ ಹೇಳಿದ್ದಾರೆ. ಯಾರು ಏನೇ ಹೇಳಿದರೂ ಅವರುಗಳು ಅದನ್ನು ಕೇಳಿ ಬಿಡುತ್ತಾರೆ. ಡಿಕೆಶಿ ವಿಚಾರವಾಗಿ ಡೆಲ್ಲಿಗೆ ತೆರಳಿದ್ದರಿಂದ ಕುಮಾರಸ್ವಾಮಿ ಅವರ ಬಳಿ ನನಗೆ ಮಾತನಾಡುವುದಕ್ಕೆ ಸಮಯ ಸಿಕ್ಕಿಲ್ಲ. ಕುಮಾರಸ್ವಾಮಿ ಹಾಗೂ ದೇವೇಗೌಡರ ದೇಹ ಬಂಗಾರ, ಆದರೆ ಕಿವಿ ಮಾತ್ರ ಹಿತ್ತಾಳೆಯಾದ್ದರಿಂದ ಕೆಲ ಭಟ್ಟಂಗಿಗಳ ಮಾತನ್ನು ಕೇಳುತ್ತಾರೆ. ಜೆಡಿಎಸ್ ಪಕ್ಷ ನನ್ನನ್ನು ಸಂಸದನಾಗಿ ಮಾಡಿದ್ದಕ್ಕೆ ನನಗೆ ಕೃತಜ್ಞತೆ ಇದೆ. ಜೆಡಿಎಸ್ ವರಿಷ್ಠರ ಮೇಲೆ ಗೌರವವಿದೆ. ದೇವೇಗೌಡರು ಹಲವು ಒಕ್ಕಲಿಗ ನಾಯಕರನ್ನು ಬೆಳೆಸಿದ್ದಾರೆ. ನನ್ನ ಮುಂದೆ ಯಾವುದೇ ಅವಕಾಶ ಇಲ್ಲ. ನಾನು ಜೆಡಿಎಸ್ ಪಕ್ಷದಲ್ಲೇ ಇರುತ್ತೇನೆ ಎಂದರು.