ನಟ ಸುದೀಪ್ ಅಭಿಮಾನಿ ಮೇಲೆ ಹಲ್ಲೆ ನಡೆಸಿದ ನಾಲ್ವರು ಆರೋಪಿಗಳ ಬಂಧನ…

206
firstsuddi

ಉಡುಪಿ: ನಟ ಸುದೀಪ್ ಅಭಿಮಾನಿ ಮೇಲೆ ಹಲ್ಲೆ ನಡೆಸಿದ ನಾಲ್ವರು ಆರೋಪಿಗಳನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ. ಕುಂದಾಪುರ ಚಿಕನ್‌ಸಾಲ್ ರೋಡ್ ನಿವಾಸಿ ಗುರುರಾಜ್ ಪುತ್ರನ್(28), ಚಿಕನ್‌ಸಾಲ್ ಹೆಬ್ಬಾಗಿಲು ಮನೆ ನಿವಾಸಿ ಸಂತೋಷ (30), ಚಿಕನ್‌ಸಾಲ್ ರೋಡ್, ಕಸಬಾ ಗ್ರಾಮದ ಪ್ರದೀಪ್(29), ರವಿರಾಜ್ ಬಂಧಿತ ಆರೋಪಿಗಳು. ಬ್ರಹ್ಮಾವರ, ಕೋಟತಟ್ಟು ಬಾರಿಕೆರೆ ನಿವಾಸಿ ರತ್ನಾಕರ ಪೂಜಾರಿ ಅವರು ನಟ ಸುದೀಪ್ ಅಭಿಮಾನಿಯಾಗಿದ್ದು. ಈ ಹಿಂದೆ ವಿನಯ್ ಗುರೂಜಿ ಅವರು ನಟ ಸುದೀಪ್ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದು, ಇದನ್ನು ವಿರೋಧಿಸಿ ಸಾಮಾಜಿಕ ಜಾಲತಾಣದಲ್ಲಿ ಬಂದ ಸಂದೇಶವನ್ನು ರತ್ನಾಕರ್ ಅವರು ಪೇಸ್‌ಬುಕ್‌ನಲ್ಲಿ ಶೇರ್ ಮಾಡಿದ್ದರು. ಇದರಿಂದ ಕೋಪಗೊಂಡಿದ್ದ ಎಂಟು, ಹತ್ತು ಮಂದಿ ಆರೋಪಿಗಳು ಅ.13ರಂದು ಕುಂದಾಪುರ ಸಂಗಮ್ ಶಾಲೆ ಬಳಿ ರತ್ನಾಕರ್ ಅವರಿಗೆ, ‘ನಮ್ಮ ವಿನಯ್ ಗುರೂಜಿ ಬಗ್ಗೆ ಫೇಸ್‌ಬುಕ್‌ನಲ್ಲಿ ಅವಹೇಳನ ಮಾಡುತ್ತಿಯಾ’ ಎಂದು ಅವಾಚ್ಯ ಶಬ್ದಗಳಿಂದ ಬೈದು, ಬೈಕ್‌ನ ಬಂಪರ್‌ಗೆ ಅಳವಡಿಸುವ ಕಬ್ಬಿಣದ ರಾಡ್‌ನಿಂದ ಹಲ್ಲೆ ಮಾಡಿದ್ದರು. ಉಳಿದ ಆರೋಪಿಗಳ ಬಂಧನಕ್ಕೆ 2 ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣವನ್ನು ಜವಾಬ್ದಾರಿಯುತ, ವಿವೇಚನಾತ್ಮಕವಾಗಿ ಬಳಸುವ ಮೂಲಕ ಇಂತಹ ಘಟನೆಗಳು ನಡೆಯದಂತೆ ಸಹಕರಿಸುವಂತೆ ಜಿಲ್ಲಾ ಪೊಲೀಸ್ ಇಲಾಖೆ ಸಾರ್ವಜನಿಕರಲ್ಲಿ ವಿನಂತಿಸಿಕೊಂಡಿದ್ದಾರೆ.