ಹಾಸನ : ಇಂಡಿಯನ್ ಆಯಿಲ್ ಗ್ಯಾಸ್ ಟ್ಯಾಂಕರ್‌ನಿಂದ ಅನಿಲ ಸೋರಿಕೆ, ಜನರಲ್ಲಿ ಮನೆಮಾಡಿದ ಆತಂಕ…

512

ಹಾಸನ : ಚಲಿಸುತ್ತಿದ್ದ ಇಂಡಿಯನ್ ಆಯಿಲ್ ಗ್ಯಾಸ್ ಟ್ಯಾಂಕರ್‌ನಿಂದ ಅನಿಲ ಸೋರಿಕೆಯಾದ ಘಟನೆ ಸಕಲೇಶಪುರದಲ್ಲಿ ನಡೆದಿದ್ದು, ಸುತ್ತ ಮುತ್ತ ಜನರಲ್ಲಿ ಆತಂಕ ಮನೆಮಾಡಿದೆ. ಟ್ಯಾಂಕರ್ ಮಂಗಳೂರಿನಿಂದ ಬೆಂಗಳೂರಿಗೆ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಚಲಿಸುತ್ತಿದ್ದ ವೇಳೆ ಪಟ್ಟಣದ ಚೆಸ್ಕಾಂ ಕಚೇರಿ ಬಳಿ ಟ್ಯಾಂಕರ್‍ನ ಮುಖ್ಯ ವಾಲ್ವ್ ನ  ಬೋಲ್ಟ್ ತುಂಡಾದ ಪರಿಣಾಮ ಭಾರಿ ಪ್ರಮಾಣದ ಅನಿಲ ಸೋರಿಕೆಯಾಗಿದ್ದು, ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿಗಳು ನೀರನ್ನು ಹಾಯಿಸಿ ಟ್ಯಾಂಕರ್ ಸ್ಪೋಟಗೊಳ್ಳದಂತೆ ಎಚ್ಚರಿಕೆ ವಹಿಸುತ್ತಿದ್ದಾರೆ. ಅನಿಲ ಸೋರಿಕೆಯಾಗುತ್ತಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಸಮೀಪದ ಪದವಿ ಪೂರ್ವ ಕಾಲೇಜು, ಬಾಲಕಿಯರ ಕಾಲೇಜುಗಳಿಗೆ ರಜೆ ನೀಡಿದ್ದು, ತೋಟಗಾರಿಕೆ, ಕೃಷಿ ಇಲಾಖೆ, ಬಾಲಕಿಯರ ವಸತಿ ನಿಲಯ, ನಾಡ ಕಚೇರಿ, ಉರ್ದು ಶಾಲೆಯನ್ನು ಬಂದ್ ಮಾಡಿ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳನ್ನು ಹೊರಗೆ ಕಳುಹಿಸಿದ್ದಾರೆ. ಅಲ್ಲದೇ ಸುತ್ತ ಮುತ್ತ ಇರುವ ಮನೆಗಳಲ್ಲಿ ಯಾರೂ ಒಲೆ ಉರಿಸದಂತೆ ಮನವಿ ಮಾಡಿಕೊಂಡಿದ್ದಾರೆ. ನಗರದ ಸುತ್ತ ಮುತ್ತ ವಿದ್ಯುತ್ ಸರಬರಾಜನ್ನು ಸ್ಥಗಿತಗೊಳಿಸಲಾಗಿದ್ದು, ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.