ನಾನು ಯಾವುದೇ ಆಣೆ ಪ್ರಮಾಣ ಮಾಡಲು ಬಂದಿಲ್ಲ, ನನ್ನನ್ನು ಕೊಂಡುಕೊಂಡವರನ್ನು ಭೇಟಿಯಾಗಲು ಬಂದಿದ್ದೇನೆ – ಹೆಚ್.ವಿಶ್ವನಾಥ್

259
firstsuddi

ಮೈಸೂರು : ಹೆಚ್.ವಿಶ್ವನಾಥ್ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು 25ಕೋಟಿ ರೂ ಹಣವನ್ನು ಪಡೆದಿದ್ದಾರೆ ಎಂಬ ಸಾ.ರಾ ಮಹೇಶ್ ಅವರ ಆರೋಪ ಸುಳ್ಳು, ನಾನು ಈ ಬಗ್ಗೆ ಆಣೆ-ಪ್ರಮಾಣ ಮಾಡುವುದಿಲ್ಲ ಎಂದು ಅನರ್ಹ ಶಾಸಕ ಹೆಚ್.ವಿಶ್ವನಾಥ್ ಅವರು ತಿಳಿಸಿದ್ದಾರೆ. ಚಾಮುಂಡಿ ಬೆಟ್ಟಕ್ಕೆ ಅನರ್ಹ ಶಾಸಕ ಹೆಚ್.ವಿಶ್ವನಾಥ್ ಹಾಗೂ ಮಾಜಿ ಸಚಿವ ಸಾ.ರಾ ಮಹೇಶ್ ಅವರು ಭೇಟಿ ನೀಡಿದ್ದು, ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್.ವಿಶ್ವನಾಥ್ ಅವರು ನಾನು ಯಾವುದೇ ಆಣೆ ಪ್ರಮಾಣ ಮಾಡಲು ಬಂದಿಲ್ಲ. ನನ್ನನ್ನು ಕೊಂಡುಕೊಂಡವರನ್ನು ಭೇಟಿಯಾಗಲು ಬಂದಿದ್ದೇನೆ. ಆ ವ್ಯಕ್ತಿಯನ್ನು ಸಾ.ರಾ ಮಹೇಶ್ ಅವರು ಚಾಮುಂಡಿ ಬೆಟ್ಟಕ್ಕೆ ಕರೆದುಕೊಂಡು ಬಂದರೆ ನಾನು ಅವರ ಆರೋಪವನ್ನು ಒಪ್ಪಿಕೊಳ್ಳುತ್ತೇನೆ. ಸುಖಾ ಸುಮ್ಮನೆ ನಾನು ಯಾಕೆ ಆಣೆ ಪ್ರಮಾಣ ಮಾಡಲಿ? ಸಾ.ರಾ ಮಹೇಶ್ ಸಾವಿರ ಕೇಳುತ್ತಾರೆ. ಅದಕ್ಕೆ ಕೂತುಕೊಂಡು ನಾನು ಆಣೆ ಮಾಡಲಾ? ನನಗೆ 25 ಕೊಟಿ ನೀಡಿದ ವ್ಯಕ್ತಿ ಬಂದು ಹೌದಪ್ಪಾ ಅವರು ನನ್ನ ಬಳಿ ಹಣವನ್ನು ಪಡೆದುಕೊಂಡಿದ್ದಾರೆ ಹೀಗಾಗಿ ಬಂದು ಆಣೆ ಪ್ರಮಾಣ ಮಾಡಿ ಎಂದರೆ ಮಾಡುತ್ತೇನೆ. ಅದು ಬಿಟ್ಟು ಸುಮ್ಮನೆ ಯಾಕೆ ಆಣೆ ಮಾಡಲಿ? ಅವರು ಬರಲಿಲ್ಲ ಎಂದರೆ ನಾನು ವಾಪಸ್ ಹೋಗುತ್ತೇನೆ. ಆಗ ಮಹೇಶ್ ಅವರ ಆರೋಪ ಸುಳ್ಳೆಂದು ಜನರಿಗೆ ತಿಳಿಯುತ್ತದೆ ಎಂದು ಕಿಡಿಕಾರಿದರು.