ಬೆಂಗಳೂರು : ಇವಿಎಂಗಳ ಮೇಲೆ ಅನುಮಾನ ಇನ್ನೂ ಹೆಚ್ಚಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಇಂದು ಮಹಾರಾಷ್ಟ್ರ ಮತ್ತು ಹರಿಯಾಣ ಚುನಾವಣಾ ಫಲಿತಾಂಶ ಹಿನ್ನೆಲೆ, ವಿಧಾನಸೌಧದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಎರಡೂ ರಾಜ್ಯಗಳಲ್ಲಿ ಇನ್ನೂ ಪೂರ್ಣ ಫಲಿತಾಂಶ ಬಂದಿಲ್ಲ. ಕಳೆದ ಬಾರಿ ಚುನಾವಣೆಗೆ ಹೋಲಿಸಿದರೆ ಬಿಜೆಪಿಗೆ ಕಡಿಮೆ ಸ್ಥಾನಗಳು ಬಂದಿವೆ. ಮಹಾರಾಷ್ಟ್ರದಲ್ಲಿ ಬಿಜೆಪಿ ಕಡಿಮೆ ಸ್ಥಾನ ಬಂದಿದೆ. ಹರಿಯಾಣದಲ್ಲಿ ಅತಂತ್ರ ಫಲಿತಾಂಶ ಬಂದಿದೆ. ದೇಶದಲ್ಲಿ ಮೋದಿ ನಾಯಕತ್ವದ ವಿಶ್ವಾಸ ಕಡಿಮೆಯಾಗುತ್ತಿದೆ ಎನ್ನುವುದಕ್ಕೆ ಈ ಫಲಿತಾಂಶವೇ ಉದಾಹರಣೆಯಾಗಿದೆ. ಸಮೀಕ್ಷೆಗಳಲ್ಲಿ ಬಿಜೆಪಿಗೆ ಭಾರೀ ಬಹುಮತ ಬರುತ್ತದೆ ಎಂದು ಹೇಳಲಾಗಿತ್ತು. ಕಾಂಗ್ರೆಸ್ ಪಕ್ಷಕ್ಕೆ ಸಂಪನ್ಮೂಲಗಳ ಕೊರತೆ ಇತ್ತು. ಸಾಕಷ್ಟು ನಾಯಕರು ಪಕ್ಷವನ್ನು ತೊರೆದರು. ಕಾಂಗ್ರೆಸ್‍ನ ಪ್ರತಿಪಕ್ಷ ನಾಯಕರೇ ಬಿಜೆಪಿಗೆ ಹೋಗಿದ್ದರು.
ಹರಿಯಾಣದಲ್ಲಿ ಯಾವುದೇ ಕಾರಣಕ್ಕೂ ಬಿಜೆಪಿ ಸರ್ಕಾರ ರಚನೆ ಮಾಡಲು ಸಾಧ್ಯವೇ ಇಲ್ಲ. ಬಿಜೆಪಿಯವರು ತಮ್ಮ ಸಾಧನೆಗಳನ್ನು ಹೇಳಿ ಚುನಾವಣೆ ಎದುರಿಸಿಲ್ಲ. ಪಾಕಿಸ್ತಾನ, ಕಾಶ್ಮೀರ ಎಂದು ಹೇಳಿ ಚುನಾವಣೆ ಎದುರಿಸಿದ್ದಾರೆ. ಭಾವನಾತ್ಮಕ ವಿಚಾರಗಳ ಮೇಲೆ ಚುನಾವಣೆಗೆ ಹೋದರು. ಇದನ್ನು ಮತದಾರರು ತಿರಸ್ಕಾರ ಮಾಡಿದ್ದಾರೆ. ಬಿಜೆಪಿಗೆ ಶೇಕಡಾವಾರು ಮತಗಳು ಕಡಿಮೆಯಾಗಿವೆ. ಕಳೆದ ಬಾರಿ ಚುನಾವಣೆಗಿಂತ ಕಾಂಗ್ರೆಸ್ ಗೆ ಶೇಕಡಾವಾರು ಮತಗಳು ಈಗ ಹೆಚ್ಚಾಗಿ ಬಂದಿದೆ. ಸಂಪನ್ಮೂಲ ಕೊರತೆಯಿಂದ ನಮಗೆ ಕಡಿಮೆ ಸ್ಥಾನ ಬಂದಿದೆ. ಜನರು ಮೋದಿ ಅವರನ್ನು ತಿರಸ್ಕಾರ ಮಾಡಿದ್ದಾರೆ. ಕಳೆದ ಬಾರಿ ಚುನಾವಣೆಗೆ ಹೋಲಿಕೆ ಮಾಡಿದರೆ ಎರಡೂ ರಾಜ್ಯಗಳಲ್ಲಿ ಮತಗಳ ಪ್ರಮಾಣ ಕಡಿಮೆ ಆಗಿದೆ ಎಂದರು.










