ಕಲಬುರಗಿ : ಹೈದರಾಬಾದ್ನ ಪಶುವೈದ್ಯೆ ಪ್ರಿಯಾಂಕ ರೆಡ್ಡಿ ಅವರ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿರುವ ಬೆನ್ನಲ್ಲೇ ಇದೀಗ 8ವರ್ಷದ ಅಪ್ರಾಪ್ತ ಬಾಲಕಿಗೆ ಚಾಕಲೇಟ್ ನೀಡುವುದಾಗಿ ಆಸೆ ತೋರಿಸಿ ಕರೆದೊಯ್ದು ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಯಾಕಾಪುರ ಗ್ರಾಮದಲ್ಲಿ ನಡೆದಿದೆ. ಯಲ್ಲಪ್ಪ(35) ಅತ್ಯಾಚಾರ ಎಸಗಿದ ಕಾಮುಕ. ನಿನ್ನೆ ಶಾಲೆಗೆ ತೆರಳಿದ್ದ ಬಾಲಕಿ ಸಂಜೆಯಾದರೂ ಮನೆಗೆ ಮರಳದೇ ಇದ್ದಾಗ ಆತಂಕಗೊಂಡ ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬಾಲಕಿ ಸಂಜೆ ವೇಳೆಯಲ್ಲಿ ಯಲ್ಲಪ್ಪ ಅವರೊಂದಿಗೆ ಓಡಾಡುತ್ತಿದ್ದನ್ನು ಕೆಲವು ಗ್ರಾಮಸ್ಥರು ನೋಡಿದ್ದು, ಬಳಿಕ ಅವರನ್ನು ಸುಲೇಪೇಠ್ ಠಾಣೆಯ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದಾಗ ತಾನೇ ಅತ್ಯಾಚಾರ ಎಸಗಿ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಸದ್ಯ ಈ ಘಟನೆಯಿಂದ ಗ್ರಾಮಸ್ಥರು ಭಯಭೀತರಾಗಿದ್ದು, ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.










