ಚಿಕ್ಕಮಗಳೂರು : ಆಂಧ್ರಪ್ರದೇಶದ ತೆಲಂಗಾಣದಲ್ಲಿ ಇತ್ತೀಚೆಗೆ ಪಶುವೈದ್ಯೆ ಡಾ|| ಪ್ರಿಯಾಂಕ ರೆಡ್ಡಿ ಅವರ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆಯನ್ನು ಖಂಡಿಸಿ ಪಶುವೈದ್ಯಾಧಿಕಾರಿಗಳು ನಗರದಲ್ಲಿ ಇಂದು ಪ್ರತಿಭಟನೆ ನಡೆಸಿದರು.
ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಪಶುವೈಧ್ಯಾಧಿಕಾರಿಗಳು ಕರ್ನಾಟಕ ಪಶುವೈದ್ಯಕೀಯ ಸಂಘದ ಜಿಲ್ಲಾ ಘಟಕದ ನೇತೃತ್ವದಲ್ಲಿ ಆಜಾದ್ ಪಾರ್ಕ್ ವೃತ್ತದ ಬಳಿ ಕೆಲಕಾಲ ಪ್ರತಿಭಟನೆ ನಡೆಸಿ ಹಂತಕರ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೂ ಮುನ್ನ ಜಿಲ್ಲಾಧಿಕಾರಿ ಡಾ|| ಬಗಾಧಿ ಗೌತಂ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಪಶುವೈಧ್ಯಾಧಿಕಾರಿಗಳು ಡಾ|| ಪ್ರಿಯಾಂಕ ರೆಡ್ಡಿ ಅವರನ್ನು ಹತ್ಯೆಗೈದ ಆರೋಪಿಗಳನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಬೇಕು ಎಂದು ಆಗ್ರಹಿಸಿದರು.
ಡಾ|| ಪ್ರಿಯಾಂಕ ರೆಡ್ಡಿ ಅವರ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣ ಇಡೀ ಮನುಕುಲವೇ ತಲೆತಗ್ಗಿಸುವಂತಿದೆ ಎಂದ ವೈದ್ಯಾಧಿಕಾರಿಗಳು ಇಂತಹ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಅತ್ಯಾಚಾರಿಗಳು ಮತ್ತು ಹಂತಕರ ವಿರುದ್ದ ಶ್ರೀಘ್ರ ಕಠಿಣ ಕ್ರಮ ಕೈಗೊಳ್ಳಲು ವಿಶೇಷ ನ್ಯಾಯಾಲಯ ಹಾಗೂ ಬಲವಾದ ಕಾನೂನು ರೂಪಿಸಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ಪಶುವೈದ್ಯಕೀಯ ಸಂಘದ ಜಿಲ್ಲಾಧ್ಯಕ್ಷ ಡಾ|| ಎ.ಬಿ.ಪ್ರಭಾಕರ್, ಉಪಾಧ್ಯಕ್ಷ ಡಾ|| ಎಸ್.ಕಿರಣ್‍ಕುಮಾರ್, ಖಜಾಂಚಿ ಡಾ|| ವಾಗೀಶ್ ಪಂಡಿತ್, ಪ್ರಧಾನ ಕಾರ್ಯದರ್ಶಿ ಡಾ|| ಬಿ.ಇ. ಅರುಣ್, ಡಾ|| ಎಸ್.ಬಿ.ಉಮೇಶ್, ಅಮೃತ್ ಮಹಲ್ ತಳಿ ಸಂವರ್ಧನಾ ಕೇಂದ್ರದ ಡಾ|| ರಾಜಶೇಖರಯ್ಯ, ಪಶುವೈದ್ಯಾಧಿಕಾರಿ ಡಾ|| ರಮೇಶ್ ಹಾಜರಿದ್ದರು.










