ಬೆಂಗಳೂರು : ಪೌರತ್ವ ತಿದ್ದುಪಡಿ ವಿರೋಧಿಸಿ ಮಂಗಳೂರಿನಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆಯ ವಿಡಿಯೋವನ್ನು ಮಂಗಳೂರು ನಗರ ಪೊಲೀಸರು ಬಿಡುಗಡೆ ಮಾಡಿದ್ದು, ಈ ಕುರಿತು ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅವರು ತಮ್ಮ ಟ್ವಿಟರ್ ಮೂಲಕ ಸರ್ಕಾರ ಹಾಗೂ ಪೊಲೀಸರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಬೆಂಗಳೂರಿನಲ್ಲಿ ಲಕ್ಷಕ್ಕೂ ಹೆಚ್ಚು ಮಂದಿ ಶಾಂತಿಯುತ ಪ್ರತಿಭಟನೆ ನಡೆಸಿದರು. ಬೆಂಗಳೂರಿನಲ್ಲಿ ಲಕ್ಷ ಜನ ಸೇರಿದರೂ ಶಾಂತಿಯುತವಾಗಿ ನಡೆದ ಪ್ರತಿಭಟನೆ ಮಂಗಳೂರಿನಲ್ಲಿ ವಿಕೋಪಕ್ಕೆ ಹೋಗಲು ಕಾರಣವೇನು? ಮಂಗಳೂರನ್ನು ಕೋಮು ಪ್ರಯೋಗಶಾಲೆ ಮಾಡಿಕೊಂಡಿರುವ ಬಿಜೆಪಿ ಇಬ್ಬರು ಅಮಾಯಕರನ್ನು ಬಲಿ ತೆಗೆದುಕೊಂಡಿದ್ದು ಹೇಗೆ? ಮತ್ತು ಏಕೆ? ದಾಂಧಲೆಕೋರರಿಗೆ ಗುಂಡಿಕ್ಕಿದ್ದೇವೆ ಎನ್ನುವ ರಾಜ್ಯಸರ್ಕಾರ ಅವರಿಗೆ ಪರಿಹಾರ ಏಕೆ ಘೋಷಿಸಿತು. ಮಂಗಳೂರಿನ ಪ್ರತಿಭಟನೆ ವೇಳೆ ಸೈಜುಗಲ್ಲುಗಳನ್ನು ತಂದ ವಿಡಿಯೋಗಳನ್ನು ಇಷ್ಟೊಂದು ತಡವಾಗಿ ಬಿಡುಗಡೆಗೊಳಿಸುತ್ತಿರುವ ಸರ್ಕಾರ ಅದಕ್ಕೆ ಸಂಬಂಧಿಸಿದಂತೆ ಯಾರನ್ನು ಬಂಧಿಸಿದೆ? ಎಷ್ಟು ವಾಹನಗಳನ್ನು ವಶಕ್ಕೆ ತೆಗೆದುಕೊಂಡಿದೆ? ಕಲ್ಲು ತೂರಾಟಕ್ಕೆ ತಂದ ವಾಹನಗಳ ವಿಡಿಯೋ ಮಂಗಳೂರಿನ ಗಲಭೆಯದೋ? ಅಥವಾ ಬೇರೆಡೆಯದೋ? ಹಿಂಸಾತ್ಮಕ ಪ್ರತಿಭಟನೆಗೆ ನನ್ನ ಬೆಂಬಲ ಖಂಡಿತ ಇಲ್ಲ. ಆದರೆ ವಿರೋಧ ಪಕ್ಷದ ಸದಸ್ಯನಾಗಿ ರಾಜ್ಯದ ಕಾನೂನು-ಸುವ್ಯವಸ್ಥೆಗೆ ಭಂಗ ತರುವ ನಿಟ್ಟಿನಲ್ಲಿ ಸರ್ಕಾರ ಪೊಲೀಸರೇ ಪಿತೂರಿ ನಡೆಸಿದರೆ ಸುಮ್ಮನೆ ಕೂರಲಾಗುವುದಿಲ್ಲ. ಇದಕ್ಕೆ ಸಂಬಂಧಿಸಿದವರು ಉತ್ತರ ಕೊಡುವರೇ? ಎಂದು ವಾಗ್ದಾಳಿ ನಡೆಸಿದ್ದಾರೆ.










