ಮೂಡಿಗೆರೆ : ಕ್ಷೇತ್ರ ಸಂಪನ್ಮೂಲ ಆಧಿಕಾರಿಯನ್ನು ಕೂಡಲೇ ಅಮಾನತ್ತು ಮಾಡಿ ಆದೇಶ ಹೊರಡಿಸಬೇಕು : ಚಿಪ್ರಗುತ್ತಿ ಪ್ರಶಾಂತ್ ಒತ್ತಾಯ…

686
firstsuddi

ಮೂಡಿಗೆರೆ : ದೇಶದ ಉತ್ತಮ ಪ್ರಜೆಗಳನ್ನು ರೂಪಿಸಬೇಕಾಗಿರುವ ಇಲ್ಲಿನ ಕ್ಷೇತ್ರ ಸಂಪನ್ಮೂಲ ಆಧಿಕಾರಿಗಳ ಕಛೇರಿಯಲ್ಲಿ ದೊಡ್ಡ ಮಟ್ಟದಲ್ಲಿ ಬ್ರಷ್ಟಾಚಾರ ನಡೆಯುತ್ತಿದ್ದು ಶಿಕ್ಷಕರ ತರಬೇತಿ ಕಾರ್ಯಗಾರಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಶೈಕ್ಷಣಿಕ ಗುಣಮಟ್ಟದ ದೃಷ್ಟಿಯಿಂದ ಇಲ್ಲಿನ ಕ್ಷೇತ್ರ ಸಂಪನ್ಮೂಲ ಅಧಿಕಾರಿಯನ್ನು ಕೂಡಲೇ ಅಮಾನತ್ತು ಮಾಡಿ ಆದೇಶ ಹೊರಡಿಸಬೇಕು. ಎಂದು ವಂದೇ ಮಾತರಂ ಸಂಘದ ರಾಜ್ಯಾಧ್ಯಕ್ಷ ಚಿಪ್ರಗುತ್ತಿ ಪ್ರಶಾಂತ್ ಒತ್ತಾಯ ಮಾಡಿದ್ದಾರೆ.
ಶಿಕ್ಷಣ ವಲಯಗಳನ್ನು ದೇವಸ್ಥಾನಗಳಿಗೆ ಹೋಲಿಕೆ ಮಾಡಲಾಗುತ್ತದೆ. ಶೈಕ್ಷಣಿಕ ಅಭಿವೃದ್ಧಿ, ಗುಣಮಟ್ಟ ಪರಿಶೀಲನೆ, ತರಬೇತಿ ಮುಂತಾದ ಶೈಕ್ಷಣಿಕ ಕಾರ್ಯಕ್ರಮಗಳಿಗಾಗಿ ಕ್ಷೇತ್ರ ಸಂಪನ್ಮೂಲ ಅಧಿಕಾರಿ ಹುದ್ದೆಯನ್ನು ಸೃಷ್ಟಿ ಮಾಡಿ ಅಧಿಕಾರ ನೀಡಲಾಗಿದೆ. ಶಿಕ್ಷಕರಿಗೆ ಉನ್ನತ ಮಟ್ಟದ ತರಬೇತಿ, ಗಣಿತ ವಲಯ, ಕನ್ನಡ ಸಂಪದ, ಸಮಾಜ, ಇಂಗ್ಲೀಷ್ ಸೇರಿದಂತೆ ಹಲವು ಪಠ್ಯಕ್ರಮದಲ್ಲಿ ಶಿಕ್ಷಕರ ಕೌಶಲ್ಯವನ್ನು ಹೆಚ್ಚಿಸುವುದು ಕಛೇರಿಯ ಪ್ರಮುಖ ಆದ್ಯತೆಯಾಗಿರುತ್ತದೆ. ಆದರೆ ಇಂಥಹ ಚಟುವಟಿಕೆಗಳಿಂದ ದೂರ ಉಳಿದು, ಸೈಕಲ್ ವಿತರಣೆ, ಪುಸ್ತಕ, ಸಮವಸ್ತ್ರ ವಿತರಣೆಯಲ್ಲಿ ಮಾಡಬಹುದಾದ ಅವ್ಯವಹಾರಗಳನ್ನು ನಡೆಸುವಲ್ಲಿ ಮಾತ್ರ ಗಮನ ಹರಿಸಲಾಗುತ್ತಿದೆ. ಇದಷ್ಟೇ ಸಾಲದು ಎಂಬಂತೆ ಶಿಕ್ಷಕರಿಗೆ ತರಬೇತಿ ನೀಡುವ ಸಮಯದಲ್ಲಿ ಶಿಕ್ಷಕರಿಗೆ ನೀಡುವ ಊಟದ ವಿಚಾರದಲ್ಲಿ ಕೂಡ ಕಮಿಷನ್ ದಂಧೆಗೆ ಇಲ್ಲಿನ ಅಧಿಕಾರಿಗಳು ಶಾಮೀಲಾಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ದೂರಿದ್ದಾರೆ.
ಇನ್ನೂ ಹೆಚ್ಚುವರಿಯಾಗಿ ಪ್ರತಿಭಾ ಕಾರಂಜಿ, ಚಿಣ್ಣರ ಅಂಗಳ ಮುಂತಾದ ಕಾರ್ಯಕ್ರಮಗಳಲ್ಲಿ ಹೆಚ್ಚುವರಿ ಬಿಲ್ ಸೃಷ್ಟಿ ಮಾಡಿ ಸರಕಾರದ ಬೊಕ್ಕಸಕ್ಕೆ ನಷ್ಟ ಉಂಟುಮಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬರುತ್ತಿವೆ. ಇದರ ಜೊತೆಯಲ್ಲಿ ತರಬೇತಿಗೆ ಬರುವ ಮಹಿಳಾ ಶಿಕ್ಷಕರಿಗೆ ಅಗೌರವ ತೋರುತ್ತಿದ್ದು, ಅವರ ಬೇಡಿಕೆಗಳಿಗೆ ಸರಿಯಾದ ಸ್ಪಂದನೆ ನೀಡುತ್ತಿಲ್ಲ ಎಂದು ಗಂಭೀರವಾಗಿ ಆರೋಪ ಮಾಡಿರುವ ಅವರು, ಕೇವಲ ತನ್ನ ವೈಯಕ್ತಿಕ ಲಾಭಕ್ಕಾಗಿ ಕ್ಷೇತ್ರ ಸಂಪನ್ಮೂಲ ಹುದ್ದೆಯೊಂದಿಗೆ ಮತ್ತೋರ್ವ ಶಿಕ್ಷಕರಿಗೆ ನೀಡಬೇಕಾಗಿದ್ದ ವಲಯ ಸಂಪನ್ಮೂಲ ಹುದ್ದೆಯನ್ನೂ ಕೂಡ ಒಬ್ಬರೇ ಇಟ್ಟುಕೊಂಡು ಎರಡೂ ಹುದ್ದೆಯಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಿಷ್ಟೇ ಸಾಲದು ಎಂಬಂತೆ ಕ್ಷೇತ್ರ ಶಿಕ್ಷಣ ಅಧಿಕಾರಿಗಳ ಆಡಳಿತಾತ್ಮಕ ಕಾರ್ಯಗಳಲ್ಲೂ ಮೂಗು ತೂರಿಸುವ ಕೆಲಸಗಳನ್ನು ಮಾಡುತ್ತಿದ್ದು, ಹಲವು ರೀತಿಯಲ್ಲಿ ಶಿಕ್ಷಣ ಇಲಾಖೆಯನ್ನು ಗೋಳು ಹೊಯ್ದುಕೊಳ್ಳುತ್ತಿದ್ದಾರೆ. ಹಾಗಾಗಿ ಶೈಕ್ಷಣಿಕ ಹಿತದೃಷ್ಟಿಯಿಂದ ಇಂಥಹ ಹಲವು ವಿಚಾರಗಳನ್ನು ಮುಂದಿಟ್ಟುಕೊಂಡು ಶಿಕ್ಷಣ ಇಲಾಖೆಯ ಮೇಲಾಧಿಕಾರಿಗಳು ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.