ಚಿಕ್ಕಮಗಳೂರು : ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಅನುತ್ತೀರ್ಣರಾದಾಗ ನಿರಾಶರಾಗಬಾರದು : ಆರ್.ಕೆ.ಬಾಲಚಂದ್ರ.

306
firstsuddi

ಚಿಕ್ಕಮಗಳೂರು : ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಅನುತ್ತೀರ್ಣರಾದಾಗ ನಿರಾಶರಾಗಬಾರದು ಎಂದು ಮಡಿಕೇರಿ ಕಾರ್ಪೋರೇಶನ್ ಬ್ಯಾಂಕ್‍ನ ಪ್ರಧಾನ ವ್ಯವಸ್ಥಾಪಕ ಆರ್.ಕೆ.ಬಾಲಚಂದ್ರ ಸಲಹೆ ಮಾಡಿದರು.

ನಗರದ ಮಲೆನಾಡು ವಿದ್ಯಾ ಸಂಸ್ಥೆಯಲ್ಲಿ ಎಂಇಎಸ್ ಛೇಂಬರ್ ಆಫ್ ಕಾಮರ್ಸ್ ವತಿಯಿಂದ ಶನಿವಾರ ನಡೆದ ಪದವಿ ಮತ್ತು ಸ್ನಾತಕ್ಕೋತ್ತರ ಶಿಕ್ಷಣದ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳ ಬ್ಯಾಂಕಿಂಗ್ ಶಿಕ್ಷಣ ತರಗತಿಗಳ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಪರೀಕ್ಷೆಗಳು ಎದುರಾದಾಗ ವಿದ್ಯಾರ್ಥಿಗಳು ಎದೆಗುಂದಬಾರದು ಒಂದೊಮ್ಮೆ ಅನುತ್ತೀರ್ಣರಾದಲ್ಲಿ ಅದನ್ನು ಸವಾಲಾಗಿ ಸ್ವೀಕರಿಸಿ ಛಲದಿಂದ ಮತ್ತೆ ಪ್ರಯತ್ನಿಸಿ ಜಯಶೀಲರಾಗಬೇಕು ಎಂದು ಕಿವಿಮಾತು ಹೇಳಿದರು. ಸಂಸ್ಥೆಯ ಗೌರವ ಕಾರ್ಯದರ್ಶಿ ಡಾ|| ಡಿ.ಎಲ್.ವಿಜಯಕುಮಾರ್ ಮಾತನಾಡಿ ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗುವ ಮೂಲಕ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಬೇಕು ಎಂದು ಮನವಿ ಮಾಡಿದರು.

ಎಂಇಎಸ್ ಛೇಂಬರ್ ಆಫ್ ಕಾಮರ್ಸ್‍ನ ಕಾರ್ಯದರ್ಶಿ ಕೆ.ಎನ್.ಮಂಜುನಾಥ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಲ್ಕು ತಿಂಗಳ ಕಾಲ ನಡೆದ ಬ್ಯಾಂಕಿಂಗ್ ಶಿಕ್ಷಣ ತರಗತಿಗಳಲ್ಲಿ ಪಾಲ್ಗೊಂಡು ತರಬೇತಿ ನೀಡಿದ ಆರ್.ಕೆ.ಬಾಲಚಂದ್ರ ಮತ್ತು ಕೆ.ಆರ್.ಅಜಿತ್ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.

ಕಾಲೇಜಿನ ಅಧ್ಯಕ್ಷ ಎನ್.ಕೇಶವಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಆಡಳಿತಾಧಿಕಾರಿ ಎಸ್.ಶಾಂತಕುಮಾರಿ, ಪದವಿ ಕಾಲೇಜಿನ ಪ್ರಾಂಶುಪಾಲ ಡಾ|| ಹೆಚ್.ವಿಷ್ಣುವರ್ಧನ, ಪಿ.ಯು.ಕಾಲೇಜಿನ ಪ್ರಾಂಶುಪಾಲೆ ಎಂ.ಬಿ.ಜಯಶ್ರೀ,  ಉಪನ್ಯಾನಸಕಿ ಶುಗುಫ್ತಾ ಜಬೀನ್ ಉಪಸ್ಥಿತರಿದ್ದರು. ಲಾವಣ್ಯ ಕಾರ್ಯಕ್ರಮವನ್ನು ನಿರೂಪಿಸಿದರು, ಎಸ್.ಎಲ್.ಮಾನಸ ಸ್ವಾಗತಿಸಿದರು, ರಾಮೀಯ ಬರೀನ್ ವಂದಿಸಿದರು.