ಚಿಕ್ಕಮಗಳೂರು : ವಿದ್ಯಾರ್ಥಿಗಳು ಶಿಸ್ತು, ರಾಷ್ಟ್ರಭಕ್ತಿ ಮತ್ತು ದೇಶಪ್ರೇಮವನ್ನು ಮೈಗೂಡಿಸಿಕೊಳ್ಳುವ ನಿಟ್ಟಿನಲ್ಲಿ ಭಾರತ ಸೇವಾದಳಕ್ಕೆ ಸೇರಬೇಕು ಎಂದು ಸೇವಾದಳದ ಕೇಂದ್ರ ಸಮಿತಿ ಸದಸ್ಯೆ ಉಮಾ ಐ.ಬಿ.ಶಂಕರ್ ಸಲಹೆ ಮಾಡಿದರು.
ನಗರದ ಜೆವಿಎಸ್ ಶಾಲೆಯಲ್ಲಿ ಸೋಮವಾರ ನಡೆದ ಭಾರತ ಸೇವಾದಳ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸ್ವಾತಂತ್ರ್ಯ ಹೋರಾಟಕ್ಕೆ ದೇಶಭಕ್ತರು ಮತ್ತು ರಾಷ್ಟ್ರಪ್ರೇಮಿಗಳನ್ನು ತಯಾರು ಮಾಡುವ ನಿಟ್ಟಿನಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಸ್ಥಾಪಿತವಾದ ಭಾರತ ಸೇವಾದಳ ಅಂದಿನಿಂದ ಇಂದಿನವರೆಗೂ ನಿರಂತರವಾಗಿ ದೇಶಭಕ್ತರನ್ನು ಹಾಗೂ ಮಕ್ಕಳಲ್ಲಿ ಶಿಸ್ತನ್ನು ಬೆಳೆಸುತ್ತಿದೆ ಎಂದರು.
ಬದಲಾದ ಇಂದಿನ ಸನ್ನಿವೇಶದಲ್ಲಿ ಭಾರತ ಸೇವಾದಳವನ್ನು ಉಳಿಸಿ ಬೆಳೆಸುವುದು ಶಿಕ್ಷಕರ ಕೈಯಲ್ಲಿದೆ ಎಂದ ಅವರು ಶಿಕ್ಷಕರು ಪ್ರತಿ ಶಾಲೆಗಳಲ್ಲೂ ಸೇವಾದಳ ಶಾಖೆಯನ್ನು ಸ್ಥಾಪಿಸಬೇಕು ಆ ಮೂಲಕ ಸಂಸ್ಥೆಯನ್ನು ಬೆಳೆಸಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಒಕ್ಕಲಿಗರ ಸಂಘದ ಕಾರ್ಯದರ್ಶಿ ಐ.ಎಸ್.ಉಮೇಶ್ಚಂದ್ರ ಮಾತನಾಡಿ ವಿದ್ಯಾರ್ಥಿಗಳು ಕ್ರಿಯಾಶೀಲರಾಗಬೇಕಾದರೆ ಭಾರತ ಸೇವಾದಳದಂತಹ ಸಂಸ್ಥೆಗಳಿಗೆ ಸೇರಬೇಕು ಎಂದು ಕಿವಿಮಾತು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಭಾರತ ಸೇವಾದಳದ ಜಿಲ್ಲಾ ಸಂಘಟಕ ಚಂದ್ರಕಾಂತ್ ವಿದ್ಯಾರ್ಥಿಗಳಲ್ಲಿ ಶಿಸ್ತು, ರಾಷ್ಟ್ರಪೇಮ ಮತ್ತು ದೇಶಭಕ್ತಿಯನ್ನು ಬೆಳೆಸುವ ಉದ್ದೇಶದಿಂದ ಪ್ರತಿವರ್ಷ ವಿವಿಧ ಶಾಲೆಗಳಲ್ಲಿ ಸೇವಾದಳ ಸಪ್ತಾಹವನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಸಪ್ತಾಹದ ಅಂಗವಾಗಿ ನಡೆಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಸಮಾರಂಭದಲ್ಲಿ ಬಹುಮಾನ ಮತ್ತು ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.
ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಕೆ.ಎಂ.ಶ್ರೀನಿವಾಸ್ ಅಧ್ಯಕ್ಷತೆ ವಹಿಸಿದ್ದರು, ನಿರ್ದೇಶಕ ಎಸ್.ಡಿ.ಮನೋಜ್, ಶಾಲೆಯ ಆಡಳಿತಾಧಿಕಾರಿ ಕುಳ್ಳೇಗೌಡ ಉಪಸ್ಥಿತರಿದ್ದರು.
ಶಿಕ್ಷಕರಾದ ಶಂಕರೇಗೌಡ ಕಾರ್ಯಕ್ರಮವನ್ನು ನಿರೂಪಿಸಿದರು, ಬಿ.ಎಲ್.ಪ್ರಮಿಳಾ ಸ್ವಾಗತಿಸಿದರು, ಲೀಲಾವತಿ ವಂದಿಸಿದರು.
Home ಸ್ಥಳಿಯ ಸುದ್ದಿ ಚಿಕ್ಕಮಗಳೂರು : ವಿದ್ಯಾರ್ಥಿಗಳು ಶಿಸ್ತು, ರಾಷ್ಟ್ರಭಕ್ತಿ ಮತ್ತು ದೇಶಪ್ರೇಮವನ್ನು ಮೈಗೂಡಿಸಿಕೊಳ್ಳುವ ನಿಟ್ಟಿನಲ್ಲಿ ಭಾರತ ಸೇವಾದಳಕ್ಕೆ ಸೇರಬೇಕು...










