ಮೂಡಿಗೆರೆ : ಆರೋಗ್ಯವಂತ ದೈವಿಕ ಕುಟುಂಬದಲ್ಲಿ ತಾಯಿಯೇ ಮೂಲ ಆದಾರ ಸ್ತಂಭವಿದ್ದಂತೆ : ಚೇತನ್ ಲೋಬೊ.

340
firstsuddi

ಬಣಕಲ್ : ಬಾಲಿಕಾ ಮರಿಯ ಚರ್ಚ್‍ನ ಸುವರ್ಣ ಮಹೋತ್ಸವವು ಸೋಮವಾರದಂದು ಚರ್ಚ್ ಸಮುದಾಯ ಭವನದಲ್ಲಿ ಅದ್ದೂರಿಯಾಗಿ ಜರುಗಿತು. ಚಿಕ್ಕಮಗಳೂರು ಧರ್ಮಕ್ಷೇತ್ರದ ಕ್ರೈಸ್ತ ಬಿಷಪ್ ರೆ.ಡಾ. ಅಂತೋನಿ ಸ್ವಾಮಿ ಅವರು ಸುಮಾರು 50 ಕ್ಕೂ ಅಧಿಕ ಮಂದಿ ಜಿಲ್ಲೆಯ ವಿವಿಧ ಧರ್ಮಕೇಂದ್ರದ ಧರ್ಮಗುರುಗಳೊಂದಿಗೆ ಸಂಭ್ರಮದ ಬಲಿಪೂಜೆ ಅರ್ಪಿಸಿದರು.
ಸುವರ್ಣ ಮಹೋತ್ಸವದ ಬಲಿಪೂಜೆಯಲ್ಲಿ ಮಾತನಾಡಿದ ಬಿಷಪ್ ಅಂತೋನಿಸ್ವಾಮಿ ದೇವಾಲಯಗಳು ಭಾವನಾತ್ಮಕ ರೂಪದ ಪ್ರತೀಕಗಳಾಗಿದ್ದು, ಅಲ್ಲಿ ನೆರವೇರಿಸುವ ಪೂಜಾ ಕಾರ್ಯವು ಮನಸ್ಸಿಗೆ ನೆಮ್ಮದಿ ನೀಡುವುದಲ್ಲದೇ ಸಕಾರ್ಯಗಳು ದೇವರ ವರದಾನಗಳಿಂದ ನೆರವೇರುತ್ತವೆ. ದೇವರಲ್ಲಿ ನಮಗೆ ದೃಢ ನಂಬಿಕೆ, ವಿಶ್ವಾಸ ಹೊಂದಿರಬೇಕು ಎಂದರು.
ಉಡುಪಿಯ ಧರ್ಮಗುರು ಚೇತನ್ ಲೋಬೊ ಮಾತನಾಡಿ, ನಮ್ಮಲ್ಲಿ ಎಷ್ಟೇ ಹಣವಿದ್ದರೂ ಅಮ್ಮ ಇಲ್ಲದಿದ್ದರೆ ಎಲ್ಲವೂ ವ್ಯರ್ಥ. ಆರೋಗ್ಯವಂತ ದೈವಿಕ ಕುಟುಂಬದಲ್ಲಿ ನಮಗೆ ತಾಯಿಯೇ ಮೂಲ ಆದಾರ ಸ್ತಂಭವಿದ್ದಂತೆ. ಹಾಗೆಯೇ ಮಾತೆ ಮರಿಯಮ್ಮನವರೂ ಕೂಡ ಕ್ರೈಸ್ತ ಧರ್ಮದಲ್ಲಿ ಅಮ್ಮನ ವಿಶೇಷ ಸ್ಥಾನ ನೀಡಿದ್ದೇವೆ. ನಾವು ಒಗ್ಗಟ್ಟಿನಿಂದ ಒಕ್ಕೊರಲಿನಿಂದ ಮಾತೆ ಮರಿಯಮ್ಮನನ್ನು ಭಕ್ತಿಯಿಂದ ನೆನೆದರೆ ನಮಗೆ ಯಾವುದೇ ಕೊರತೆಯಿಲ್ಲ. ಫಾತಿಮನಗರ ಹಾಗೂ ಲೂರ್ದು ನಗರಗಳಲ್ಲಿ ಮರಿಯಮ್ಮನ ಪವಾಡಗಳು ಗಟ್ಟಿಯಾದ ಸಾಕ್ಷ್ಯ ನೀಡಿವೆ. ಮಾತೆಯ ಆದರ್ಶಗಳು ನಮಗೆ ಶ್ರೀರಕ್ಷೆಯಾಗಬೇಕು ಎಂದರು.
ಪೂಜೆಯ ನಂತರದ ಸುವರ್ಣ ಮಹೋತ್ಸವದ ಸಮಾರಂಭದಲ್ಲಿ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರು ಮಾತನಾಡಿ, ಸುವರ್ಣ ಮಹೋತ್ಸವಕ್ಕೆ ಶುಭಾಶಯ ಕೋರಿದ ಅವರು, ಸಮಾಜದಲ್ಲಿ ಎಲ್ಲ ಧರ್ಮಗಳು ಒಂದಾಗಿ ಜೀವಿಸಿದರೆ ಉತ್ತಮ ಸಮಾಜ ನಿರ್ಮಾಣವಾಗುತ್ತದೆ. ಪೌರತ್ವ ಕಾಯ್ದೆಯ ಅಪಪ್ರಚಾರದಿಂದ ಸಾಮರಸ್ಯ ಕೆಡುತ್ತಿದ್ದು, ಪೌರತ್ವದ ವಿಚಾರದಲ್ಲಿ ಯಾವ ಧರ್ಮಕ್ಕೂ ಹಾನಿಯಲ್ಲ. ಎಲ್ಲರೂ ಸಾಮರಸ್ಯದಿಂದ ಬದುಕಬೇಕೆಂಬುದೇ ಪ್ರಧಾನಿಯವರ ಕನಸಾಗಿದೆ ಎಂದರು.
ಮಾಜಿ ಶಾಸಕಿ ಮೋಟಮ್ಮ ಮಾತನಾಡಿ, ದೇಶದಲ್ಲಿ ಕ್ರೈಸ್ತ ಧರ್ಮದ ಅನೇಕ ಕೊಡುಗೆಗಳಿದ್ದು ಕ್ರೈಸ್ತರು ಸಾಮರಸ್ಯದಿಂದ ಬದುಕುತ್ತಿದ್ದಾರೆ. ಮಾತೆ ಮರಿಯಮ್ಮನ ಚರ್ಚ್ ಸ್ಥಾಪನೆಯಾಗಿ ಐವತ್ತು ವರ್ಷದ ಸಂಭ್ರಮದಲ್ಲಿ ಅನೇಕರು ಇಲ್ಲಿ ನೆಲೆಸಿ ಸಮಾಜದ ಒಳಿತಿಗೆ ಸಹಕಾರ ನೀಡಿದ್ದಾರೆ.
ಮಾಜಿ ಶಾಸಕ ಬಿ.ಬಿ.ನಿಂಗಯ್ಯ ಮಾತನಾಡಿ, ಕ್ರೈಸ್ತ ಧರ್ಮಿಯರು ಧಾರ್ಮಿಕವಾಗಿ, ಸಾಂಸ್ಕøತಿಕ, ನೈತಿಕವಾಗಿ ಬೋದಿಸಿ ಸಮಾಜದಲ್ಲಿ ಉತ್ತಮ ಸೇವೆ ನೀಡುತ್ತಾ ಬರುತ್ತಿದ್ದಾರೆ. ಮಾತೆ ಮರಿಯಮ್ಮನವರು, ಯೇಸು ಕ್ರಿಸ್ತರ ಸಂದೇಶಗಳು ಸರ್ವರನ್ನು ಪ್ರೀತಿಸಿ ಗೌರವಿಸು ಎಂಬುವುದಾಗಿದೆ. ಅದೇ ಮಾರ್ಗದಲ್ಲಿ ನಾವೆಲ್ಲರೂ ನಡೆಯಬೇಕು ಎಂದರು.

ಕಾರ್ಯಕ್ರಮದಲ್ಲಿ ಚರ್ಚ್‍ನ ಸ್ಥಾಪಕ ಧರ್ಮಗುರು ಫಾದರ್ ಕರ್ನೆಲಿಯಸ್ ಮೊಂತೆರೊ, ಚರ್ಚ್‍ನಲ್ಲಿ ಸೇವೆ ಸಲ್ಲಿಸಿದ ಧರ್ಮಗುರುಗಳಾದ ಅರ್ಥರ್ ಮಿನೇಜಸ್, ಡಾಲ್ಪಿ ವಾಸ್, ಸುದೀಪ್ ಗೊನ್ಸಾಲ್ವಿಸ್, ಪಾಧರ್ ಡಾಲ್ಪಿ ಪಾಯ್ಸ್, ಈ ಧರ್ಮಕೇಂದ್ರದಲ್ಲಿ ಅರಳಿದ ಧರ್ಮಗುರುಗಳು ಹಾಗೂ ಕನ್ಯಾಭಗಿನಿಯರಿಗೆ, ಚರ್ಚ್‍ಗೆ ಧಾನ ನೀಡಿರುವ ಅನೇಕ ಉಧಾರ ಧಾನಿಗಳಿಗೆ ಸನ್ಮಾನದ ಮಹಾಪೂರವೇ ಹರಿಯಿತು.
ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಸಿ.ರತನ್, ಸದಸ್ಯೆ ವೀಣಾಉಮೇಶ್, ಜಿಲ್ಲಾ ಪಂಚಾಯಿತಿ ಸದಸ್ಯ ಶಾಮಣ್ಣಬಣಕಲ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಸತೀಶ್ ಮಾತನಾಡಿದರು. ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್, ಕರ್ನಾಟಕ ಪ್ರಾಂತ್ಯದ ಕಪುಚಿನ್ ಗುರುಗಳ ಮುಖ್ಯಸ್ಥ ರೆ.ಡಾ.ಜಾನ್ ಆಲ್ವಿನ್ ಡಾಯಸ್, ಧರ್ಮಗುರು ಲ್ಯಾನ್ಸಿ ಪಿಂಟೊ, ನಜರೆತ್ ಶಾಲೆಯ ಪ್ರಾಂಶುಪಾಲೆ ಸಿಸ್ಟರ್ ಹಿಲ್ಡಾ ಲೋಬೊ, ಪಾದರ್ ಆಲ್ಬರ್ಟ್ ಡಿಸಿಲ್ವ, ಜಾರ್ಜ್ ಮೋನಿಸ್,ಅಂತೋನಿ ಡಿಸೋಜ, ಕಾರ್ಯಧರ್ಶಿ ಮರೀನಾ ಡೇಸಾ, ಪ್ರೆಸಿಲ್ಲಾ ಡಿಸೋಜ ಹಾಗೂ ಧರ್ಮಕೇಂದ್ರದ ಸರ್ವ ಭಕ್ತಾದಿಗಳು ಹಾಜರಿದ್ದರು.