ಮೂಡಿಗೆರೆ – ವಿಶ್ವಾದ್ಯಂತ ಭಾರತೀಯತೆಯಲ್ಲಿ ಏಕತೆ ಆಧಾರದ ಅಡಿಯಲ್ಲಿ ತನ್ನದೇ ಶೈಲಿಯ ಸಾಹಿತ್ಯ ಕೃಷಿಯನ್ನು ನಿರ್ಮಿಸಿ ಕೆಲಸ ಮಾಡುವ ಸಾಹಿತಿಗಳ ದೊಡ್ಡ ಗುಂಪು, ಕವಿಗಳ ಮೇಳ, ಸಾಹಿತಿಗಳ ಮತ್ತು ಸಾಹಿತ್ಯಾಸಕ್ತರ ದೊಡ್ಡ ಗುಂಪು, ವಿವಿಧ ಬಗೆಯ ರಂಗು ರಂಗಿನ ಸಾಂಸ್ಕøತಿಕ ತಂಡಗಳೆಲ್ಲಾ ಒಂದೆಡೆ ಸೇರಿ ಮೇಳೈಸಲು ವೇದಿಕೆ ಕಲ್ಪಿಸುವ ಕಾಯಕದಲ್ಲಿ ತೊಡಗಿರುವ ಆಳ್ವಾಸ್ ನುಡಿಸಿರಿ ಪ್ರತಿಷ್ಠಾನವು ಆಳ್ವಾಸ್ ನುಡಿಸಿರಿ ಕಾರ್ಯಕ್ರಮ-2020ನ್ನು ಆಯೋಜಿಸಿತ್ತು. ಸಂಜೆ ಆಯೋಜಿಸಲಾಗಿದ್ದ ಸಮಾರಂಭಕ್ಕೆ ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್ ಅವರು ಚಾಲನೆ ನೀಡಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ವಿದ್ಯಾರ್ಥಿಗಳ ಮೈ ನವಿರೇಳಿಸುವ ವಿವಿಧ ಪ್ರಾಕಾರದ ಮನೋರಂಜನಾ ಕಾರ್ಯಕ್ರಮಗಳು ಸಂಜೆ 6.30 ಗಂಟೆಗೆ ಪ್ರಾರಂಭವಾಯಿತು. ಸಮ್ಮೇಳನದಲ್ಲಿ ಕರ್ನಾಟಕ ಸೇರಿದಂತೆ ಇಡೀ ವಿಶ್ವದ ಸಂಸ್ಕøತಿಯನ್ನು ಬಿಂಬಿಸುವ ಕಾರ್ಯಕ್ರಮಗಳು ನಡೆದವು.

ಕೇರಳದ ಮೋಹಿನಿಯಾಟ್ಟಂ-ಅಷ್ಟಲಕ್ಷ್ಮೀ, ಬಡಗುತ್ತಿಟ್ಟು ಯಕ್ಷಗಾನ, ಆಂಧ್ರದ ಜಾನಪದ ಬಂಜಾರ ನೃತ್ಯ, ಸಂಭವಾಮಿ ಯುಗೇ ಯುಗೇ, ಶಾಸ್ತ್ರೀಯ ನೃತ್ಯ ಭೋ ಶಂಭೋ, ಮಣಿಪುರಿ ಸ್ಟಿಕ್ ಡ್ಯಾನ್ಸ್, ನವದುರ್ಗೆ ಶಾಸ್ತ್ರೀಯ ನೃತ್ಯ, ಶ್ರೀಲಂಕಾದ ಕ್ಯಾಂಡಿಯನ್ ನೃತ್ಯ, ಪಂಜಾಬಿ ಬಾಂಗ್ಲಾ ನೃತ್ಯ, ಗುಜರಾತಿ ಗಾರ್ಭಾ ಮತ್ತು ಪಾಂಡಿಯಾ, ಮಲ್ಲಕಂಬ ಮತ್ತು ರೋಪ್ ಕಸರತ್ತುಗಳು, ಮಣಿಪುರಿ ರೋಲ್ ಚಲಮ್, ಕಥಕ್ ನವರಂಗ್ ನೃತ್ಯ, ಪಶ್ಚಿಮ ಬಂಗಾಳದ ಪುರುಲಿಯ ಸಿಂಹ ನೃತ್ಯ, ತೆಂಕು ಯಕ್ಷ ಪ್ರಯೋಗ ಅಗ್ರಪೂಜೆ ಯಕ್ಷಗಾನ, ಮಹಿಷ ಮರ್ದಿನಿ ಹಾಗೂ ಇನ್ನಿತರೆ ವೈವಿಧ್ಯಮಯ ನೃತ್ಯ ಪ್ರಾಕಾರಗಳು ನೆರದಿದ್ದ ಸಾವಿರಾರು ಸಭಿಕರನ್ನು ಮಂತ್ರಮುಗ್ಧಗೊಳಿಸಿದವು. 
ಎಲ್ಲೋ ಒಂದು ಕಡೆ ಸಾಹಿತ್ಯ, ಸಾಂಸ್ಕøತಿಕ ಕಾರ್ಯಕ್ರಮಗಳ ಕೊರತೆ ಎದ್ದು ಕಾಣುತ್ತಿದ್ದ ಸಂದರ್ಭದಲ್ಲಿ ಇಂತಹ ಕೊರತೆಯನ್ನು ತುಂಬಿಕೊಡುವ ಕಾರ್ಯಕ್ಕೆ ಆಳ್ವಾಸ್ ನುಡಿಸಿರಿ ಜಾತ್ರೆ ಮುಖಾಂತರ ಹಿಂದಿನ 15 ವರ್ಷಗಳಿಂದ ಆಳ್ವಾಸ್ ಕಾಲೇಜು ಯಶಸ್ವಿಯಾಗಿ ನಡೆಸಿಕೊಂಡು ಬಂದಿದೆ. ಬೌದ್ಧಿಕ ಕ್ಷೇತ್ರದಲ್ಲಿ ಬಹುದೊಡ್ಡ ಕೊಡುಗೆ ನೀಡಿದ ಕೀರ್ತಿ ದಕ್ಷಿಣ ಕನ್ನಡ ಜಿಲ್ಲೆಗೆ ಸಲ್ಲುವ ಜೊತೆಯಲ್ಲಿಯೇ ಆಳ್ವಾಸ್ ಪ್ರತಿಷ್ಠಾನದಿಂದ ಆಯೋಜನೆಗೊಳ್ಳುತ್ತಿರುವ ಸಾಂಸ್ಕøತಿಕ ಕಾರ್ಯಕ್ರಮಗಳು ಹಾಗೂ ಸಮ್ಮೇಳನಗಳು ದಕ್ಷಿಣ ಕನ್ನಡ ಜಿಲ್ಲೆಗೆ ಮತ್ತೊಂದು ಗರಿ ದೊರಕಿಸಿಕೊಡುವಲ್ಲಿ ಯಶಸ್ವಿಯಾಗಿದೆ ಎನ್ನುವುದು ಬಹುತೇಕರ ಅಭಿಪ್ರಾಯವಾಗಿದೆ.
ಮಲೆನಾಡಿನ ಮಡಿಲಿನಲ್ಲಿರುವ ಮೂಡಿಗೆರೆಯ ನಾಗರೀಕರಿಗೆ ಆಳ್ವಾಸ್ ಸಂಸ್ಥೆಯ ಜೊತಿಗಿನ ನಂಟು ಹೊಸತೇನಲ್ಲ. ಹಲವು ದಶಕಗಳಿಂದ ಪಕ್ಕದ ಜಿಲ್ಲೆಯಲ್ಲಿರುವ ಮೂಡಬಿದ್ರಿ ಆಳ್ವಾಸ್ ಕಾಲೇಜಿನಲ್ಲಿ ತಮ್ಮ ಮಕ್ಕಳು ವ್ಯಾಸಂಗ ಮಾಡುವುದು ಇಲ್ಲಿನವರ ಪ್ರತಿಷ್ಠೆಯ ಸಂಕೇತ ಎಂದೇ ಹೇಳಬಹುದು. ಶಿಕ್ಷಣದ ಹೊರತಾಗಿಯೂ ಬೇರೆಯದೇ ರೀತಿಯಲ್ಲಿ ತಮ್ಮ ಸಂಸ್ಥೆಯ ಜೊತೆಗೆ ಅವಿನಾಭಾವ ಸಂಬಂಧ ಹೊಂದಿರುವ ಸ್ಥಳೀಯರ ಮನತಣಿಸುವ ಉದ್ದೇಶದಿಂದಲೇ ಆಳ್ವಾಸ್ ಪ್ರತಿಷ್ಠಾನವು ಮೂಡಿಗೆರೆಯಲ್ಲಿ ಆಳ್ವಾಸ್ ಸಾಂಸ್ಕøತಿಕ ವೈಭವ ಕಾರ್ಯಕ್ರಮವನ್ನು ಆಯೋಜಿಸಿತ್ತು.
4 ಗಂಟೆಗೂ ಹೆಚ್ಚು ಕಾಲ ನಡೆದ ದೇಶ ವಿದೇಶಗಳ ವಿವಿಧ ಪ್ರಾಕಾರದ ಶಾಸ್ತ್ರೀಯ, ಜಾನಪದ, ಸಾಂಸ್ಕøತಿಕ ಕಾರ್ಯಕ್ರಮಗಳ ವೇದಿಕೆಯಲ್ಲಿ ಅತಿಥಿಗಳ ಭಾಷಣಕ್ಕೆ ಹೆಚ್ಚಿನ ಪ್ರಾಧಾನ್ಯತೆ ಇರಲಿಲ್ಲ. ಭಾಷಣದ ಬದಲಾಗಿ ಸಭಿಕರನ್ನು ಮನತಣಿಸುವ ವಿವಿಧ ಕಾರ್ಯಕ್ರಮಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸಲಾಗಿತ್ತು. ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ, ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್, ಮಾಜಿ ಸಚಿವ ಬಿ.ಬಿ.ನಿಂಗಯ್ಯ, ತಾ.ಪಂ.ಅಧ್ಯಕ್ಷ ಕೆಸಿ ರತನ್, ಬಿಜೆಪಿ ತಾಲ್ಲೂಕು ಅಧ್ಯಕ್ಷ ಜೆ.ಎಸ್.ರಘು, ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಕುಮಾರ್, ಉದ್ಯಮಿ ಕೆ.ಮಂಚೇಗೌಡ, ಆಳ್ವಾಸ್ ಸಾಂಸ್ಕøತಿಕ ವೈಭವ ಸಮಿತಿಯ ಸದಸ್ಯರುಗಳು ಹಾಗೂ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಕಾರ್ಯಕ್ರಮದ ಬಗ್ಗೆ ಬೇಸರ : ಸಹಜವಾಗಿಯೇ ವೈಭವದ ಆಳ್ವಾಸ್ ನುಡಿಸಿರಿ ಕಾರ್ಯಕ್ರಮದ ಆಯೋಜನೆಯ ಬಗ್ಗೆ ಹಲವರ ಪ್ರತಿರೋಧ ಎದುರಾಗಿತ್ತು. ಆಳ್ವಾಸ್ ಸಂಸ್ಥೆಯು ಒಂದು ಶಿಕ್ಷಣ ಸಂಸ್ಥೆಯಾಗಿದ್ದು, ತಮ್ಮ ಶಿಕ್ಷಣ ಸಂಸ್ಥೆಯ ಪರವಾಗಿ ಜಾಹಿರಾತು ನೀಡುವ ಉದ್ದೇಶದಿಂದ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಈ ಬಾರಿಯ ಪ್ರಚಂಡ ಅತೀವೃಷ್ಟಿಯ ನಡುವೆ ಇಂಥಹ ವಿಜೃಂಭಣೆಯ ಕಾರ್ಯಕ್ರಮದ ಅಗತ್ಯ ಇರಲಿಲ್ಲ. ಆಯೋಜಕರು ಕಾರ್ಯಕ್ರಮಕ್ಕಾಗಿ ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡುವ ಬದಲು ಸಂತ್ರಸ್ಥರಿಗೆ ನೆರವಾಗುವಂಥಹ ಕಾರ್ಯಕ್ರಮಗಳನ್ನು ಆಯೋಜಿಸಬಹುದಾಗಿತ್ತು ಎನ್ನುವುದು ಬಹುತೇಕರ ಅಭಿಪ್ರಾಯವಾಗಿತ್ತು.










