ಮೂಡಿಗೆರೆ ಬಸ್ ನಿಲ್ದಾಣ ಅವ್ಯವಸ್ಥೆಯ ಆಗರ : ಪ್ರಯಾಣಿಕರ ಪರದಾಟ…

1549
  • ವರದಿ: ಪುನೀತ್ ಕಡಿದಾಳ್ 

ಮೂಡಿಗೆರೆ : ಮೂಡಿಗೆರೆ ಬಸ್ ನಿಲ್ದಾಣದಲ್ಲಿ ಮೂಲಭೂತ ಸೌಕರ್ಯಗಳಿಲ್ಲದೆ ಪ್ರಯಾಣಿಕರು ಪರದಾಡುವಂತಾಗಿದೆ. ಅದರಲ್ಲೂ ಮಹಿಳಾ ಪ್ರಯಾಣಿಕರು ಬಸ್ ನಿಲ್ದಾಣದಲ್ಲಿ ಯಾವ ಸೌಕರ್ಯಗಳಿಲ್ಲದೆ ತೀವ್ರ ಮುಜುಗರ ಎದುರಿಸುವಂತಾಗಿದೆ.

ಒಂದಿಲ್ಲೊಂದು ಅವ್ಯವಸ್ಥೆಯ ಆಗರವಾಗಿ ಜನರ ಬಾಯಲ್ಲಿ ಸುದ್ದಿಯಾಗುತ್ತಿರುವ ಮೂಡಿಗೆರೆ ಬಸ್ ನಿಲ್ದಾಣಕ್ಕೆ ಪ್ರತೀ ನಿತ್ಯವೂ ನೂರಾರು ಬಸ್ಸುಗಳು ಬಂದು ಹೋಗುತ್ತವೆ. ಅದರಲ್ಲಿ ಉತ್ತರ ಕರ್ನಾಟಕ ಭಾಗದಿಂದ ಬರುವ ಬಸ್ಸುಗಳೇ ಹೆಚ್ಚು. ದೂರದಿಂದ ಬರುವ ಪ್ರಯಾಣಿಕರಿಗೆ ಪ್ರಯಾಣದ ಮಧ್ಯೆ ಬೇಕಾಗುವ ಮೂಲಭೂತ ಅವಶ್ಯಕತೆಗಳಾದ ಶುದ್ಧವಾದ ಕುಡಿಯುವ ನೀರು, ಶುಚಿಯಾದ ಆಹಾರ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ ಸೇರಿದಂತೆ ಹಲವು ಸೌಲಭ್ಯಗಳನ್ನು ಒದಗಿಸುವ ಕರ್ತವ್ಯ ಯಾವುದೇ ಸಂಸ್ಥೆಯ ಆದ್ಯ ಕರ್ತವ್ಯವಾಗಿರುತ್ತದೆ. ಆದರೆ ಮೂಡಿಗೆರೆಯಲ್ಲಿರುವ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ ಮಾತ್ರ ಇದಕ್ಕೆ ತದ್ವಿರುದ್ಧವಾದ ಪರಿಸ್ಥಿತಿ ಇದ್ದು, ನಿಗಮದ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದ್ದಾರೆ ಎನ್ನುವುದು ಹಲವರ ಆರೋಪವಾಗಿದೆ. 
ಪ್ರತೀ ದಿನ ಮೂಡಿಗೆರೆ ಬಸ್ ನಿಲ್ದಾಣ ಸಾವಿರಾರು ಪ್ರಯಾಣಿಕರಿಂದ ತುಂಬಿ ತುಳುಕುತ್ತಿರುತ್ತದೆ. ಪ್ರತೀನಿತ್ಯ ಮೂಡಿಗೆರೆಯ ಆರ್ಥಿಕ ಚಟುವಟಿಕೆಗಳು ಪ್ರಾರಂಭವಾಗುವುದೂ ಇಲ್ಲಿಂದಲೇ ಎನ್ನಬಹುದು. ದೂರ ಪ್ರದೇಶಗಳಿಂದ ಸೇರಿದಂತೆ ಮೂಡಿಗೆರೆಯ ವಿವಿಧ ಗ್ರಾಮಗಳಿಂದ ಬರುವ ಸಾವಿರಾರು ಪ್ರಯಾಣಿಕರಿಗೆ ಯಾವುದೇ ಮೂಲಭೂತ ಸೌಕರ್ಯಗಳನ್ನು ನೀಡದೆ ವಂಚನೆ ಮಾಡಲಾಗುತ್ತಿದೆ ಎನ್ನುವುದು ಬಹುತೇಕರ ಆರೋಪವಾಗಿದೆ. ಬಿಸಿಲಿಗೆ ಬಸವಳಿದು ಬರುವ ಪ್ರಯಾಣಿಕರಿಗೆ ಶುದ್ಧವಾದ ಕುಡಿಯುವ ನೀರಿನ ಸೌಲಭ್ಯವಿಲ್ಲ. ಇಂಥಹ ವ್ಯವಸ್ಥೆಯ ಬಗ್ಗೆ ನಿಗಮದ ಜವಾಬ್ದಾರಿ ಇರಲಿ ಇಲ್ಲಿನ ಯಾವುದೇ ಜನನಾಯಕರುಗಳಿಗೆ ಕೂಡ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎನ್ನುವ ಸಾಮಾನ್ಯ ಪರಿಜ್ಞಾನವೂ ಕೂಡ ಇಲ್ಲ. ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿ ಅವಶ್ಯಕತೆ ಇಲ್ಲದ ಕಡೆಗಳಲ್ಲಿ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಿ ವ್ಯರ್ಥವಾಗಿ ಸರ್ಕಾರದ ಹಣವನ್ನು ಹಾಳುಮಾಡಲಾಗುತ್ತಿದೆ. ಅದರ ಬದಲು ಅತ್ಯವಶ್ಯವಾಗಿರುವ ಬಸ್ ನಿಲ್ದಾಣದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿದರೆ ಎಲ್ಲರಿಗೂ ಅನುಕೂಲ ಎಂಬುವುದು ಪ್ರಯಾಣಿಕ ಸಮರ್ಥ ಗೌಡ ಅವರ ಅಭಿಪ್ರಾಯವಾಗಿದೆ.
ಇನ್ನು ಆವರಣದಲ್ಲಿ ಇರುವ ಶೌಚಾಲಯದ ಶುದ್ಧತೆ ಬಗ್ಗೆ ಮೂಗು ಮುಚ್ಚಿಕೊಂಡು ಮಾತನಾಡುವುದೇ ಲೇಸು. ಶೌಚಾಲಯದ ಒಳಗೆ ಹೋಗಿ ಶೌಚ ಕಾರ್ಯಗಳನ್ನು ಮುಗಿಸಿಕೊಳ್ಳುವುದಿರಲಿ ನೂರಡಿ ದೂರದಲ್ಲಿಯೇ ಮೂಗು ಮುಚ್ಚಿಕೊಂಡು ಓಡಿಹೋಗಬೇಕಾದ ಪರಿಸ್ಥಿತಿ ಇದೆ. ಇನ್ನು ಆವರಣದ ಒಳಗಡೆಯೇ ಕಸದ ರಾಶಿ ಹಾಕಲಾಗಿದ್ದು ವಾರಕ್ಕೊಮ್ಮೆ ಕಸದ ವಿಲೇವಾರಿ ಮಾಡಲಾಗುತ್ತಿದೆ. ಸ್ವಚ್ಚ ಭಾರತ್ ಅಭಿಯಾನದ ಮೂಲಕ ಜಾಗೃತಿ ಮೂಡಿಸಬೇಕಾಗಿದ್ದ ಪಟ್ಟಣ ಪಂಚಾಯತಿ ಅಧಿಕಾರಿಗಳು ಕಣ್ಮುಚ್ಚಿ ಕುಳಿತಂತೆ ತೋರುತ್ತಿದೆ. ಬಸ್ ನಿಲ್ದಾಣದ ಒಳಗೆ ಪ್ರಯಾಣಿಕರ ಬದಲಿಗೆ ಬೀಡಾಡಿ ದನಗಳ ಹಾವಳಿ ಜೋರಾಗಿದ್ದು ಪ್ರಯಾಣಿಕರ ಮಧ್ಯದಲ್ಲಿ ನುಗ್ಗಿಕೊಂಡು ಸಾಗುವಾಗ ಹಲವರು ಬಿದ್ದ ಘಟನೆಗಳು ೨ ಇವೆ. ಸಂಜೆಯಾಗುತ್ತಿದ್ದಂತೆ ಸೊಳ್ಳೆಗಳ ಹಾವಳಿ ಕೂಡ ಜೋರಾಗಿದ್ದು ಬಸ್ ಬಾರದೆ ಇದ್ದಾಗ ಸೊಳ್ಳೆ ಹೊಡೆಯುವುದನ್ನು ಪ್ರಮುಖ ಕಾಯಕವಾಗಿದೆ.
ಹೇಳುತ್ತಾ ಹೋದರೆ ನೂರಾರು ಕಾರಣಗಳನ್ನು ನೀಡಬಹುದಾಗಿದ್ದು, ಗುಣಗಾನ ಮಾಡುವ ಸುದ್ದಿಗಳಿಗಿಂತ ಅವ್ಯವಸ್ಥೆಗಳ ಬಗ್ಗೆ ಗೊಣಗಿಕೊಳ್ಳುವುದು ಪ್ರಯಾಣಿಕರ ನಿತ್ಯ ರೊದನೆಯಾಗಿದೆ. ಇನ್ನಾದರೂ ಪರಿಸ್ಥಿತಿಯನ್ನು ಅರಿತು ಅಧಿಕಾರಿಗಳು, ಜನಪ್ರತಿನಿಧಿಗಳು ಸಮಸ್ಯೆ ಬಗೆಹರಿಕೊಡಬೇಕು ಎನ್ನುವದು ಬಹುತೇಕರ ಆಶಯವಾಗಿದೆ.