ಚಿಕ್ಕಮಗಳೂರು : ಯುವಜನತೆ ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಳ್ಳಬೇಕು : ಶಾಂತಕುಮಾರಿ.

228
firstsuddi

ಚಿಕ್ಕಮಗಳೂರು : ಯುವಜನತೆ ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಮಲೆನಾಡು ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಶಾಂತಕುಮಾರಿ ಸಲಹೆ ಮಾಡಿದರು.
ನಗರದ ಮಲೆನಾಡು ವಿದ್ಯಾಸಂಸ್ಥೆಯ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಜ್ಞಾನ ವಿಭಾಗದ ಗ್ಯಾಲಕ್ಸಿ ಫೋರಂ ವತಿಯಿಂದ ಎರಡು ದಿನಗಳ ಕಾಲ ನಡೆದ ವಿಜ್ಞಾನ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಗುರುವಾರ ಅವರು ಮಾತನಾಡಿದರು.
ಜಗತ್ತಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ವೈಜ್ಞಾನಿಕ ಕ್ರಾಂತಿ ನಡೆಯುತ್ತಿದೆ, ಭಾರತವೂ ಸಹ ವೈಜ್ಞಾನಿಕವಾಗಿ ಬಹಳಷ್ಟು ಮುಂದುವರೆದಿದೆ ಎಂದ ಅವರು ಇಂದಿನ ಯುವಜನತೆ ಅದಕ್ಕೆ ಸಾಥ್ ಕೊಡುವ ನಿಟ್ಟಿನಲ್ಲಿ ಶಿಕ್ಷಣವನ್ನು ಪಡೆಯಬೇಕು ಎಂದು ಕಿವಿಮಾತು ಹೇಳಿದರು.
ವಿದ್ಯಾರ್ಥಿಗಳು ವೈಜ್ಞಾನಿಕವಾಗಿ ಚಿಂತನೆ ಮಾಡುವುದನ್ನು ಕಲಿಯಬೇಕು, ದೇಶದ ಪ್ರಗತಿಯ ದೃಷ್ಠಿಯಿಂದ ವಿಜ್ಞಾನಿಗಳಾಗಿ ಹೊರಹೊಮ್ಮಬೇಕು ಎಂದರು.
ಕಾಲೇಜಿನ ಪ್ರಾಚಾರ್ಯ ಡಾ|| ಹೆಚ್.ವಿಷ್ಣುವರ್ಧನ್ ಮಾತನಾಡಿ ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಂಡು ವಿಜ್ಞಾನಿಗಳಾಗಿ ರೂಪುಗೊಂಡರೆ ಮಾತ್ರ ರಾಷ್ಟ್ರದ ಅಭಿವೃದ್ದಿಯಾಗುತ್ತದೆ ಎಂದು ಹೇಳಿದರು.
ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸುವ ಉದ್ದೇಶದಿಂದ ವಿಜ್ಞಾನ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಇದೇ ವೇಳೆ ವಿದ್ಯಾರ್ಥಿಗಳಿಂದ ವಿಜ್ಞಾನ ವಿಭಾಗದ ವಿವಿಧ ಮಾದರಿಗಳ ಪ್ರದರ್ಶನ ನಡೆಯಿತು, ರಸಪ್ರಶ್ನೆ ಕಾರ್ಯ ಜರುಗಿತು. ವಿಜೇತ ವಿದ್ಯಾರ್ಥಿಗಳಿಗೆ ಸಮಾರಂಭದಲ್ಲಿ ಬಹುಮಾನ ವಿತರಿಸಲಾಯಿತು.
ಸ್ವತಂತ್ರ್ಯ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ನಾಗೇಶ್, ತೀರ್ಥಹಳ್ಳಿ ಸರ್ಕಾರಿ ಕಾಲೇಜಿನ ಉಪನ್ಯಾಸಕಿ ಅಮೃತ, ಸೌರಮಂಡಲದ ಕೌತುಕಗಳ ಬಗ್ಗೆ ಉಪನ್ಯಾಸ ನೀಡಿದರು.
ಕುವೆಂಪು ವಿವಿ ಯ ಕಡೂರು ಸ್ನಾತಕ್ಕೋತ್ತರ ವಿಭಾಗದ ರಸಾಯನಶಾಸ್ತ್ರ ಮುಖ್ಯಸ್ಥ ಪ್ರೊ|| ಸತ್ಯನಾರಾಯಣ ವಿಶೇಷ ಉಪನ್ಯಾಸ ನೀಡಿದರು.
ಕಾಲೇಜಿನ ವಿಜ್ಞಾನ ವಿಭಾಗದ ಮುಖ್ಯಸ್ಥ ಕೆ.ಡಿ.ಸುದೀಪ್, ಐಡಿಎಸ್‍ಜಿ ಕಾಲೇಜಿನ ಸಹಪ್ರಾಧ್ಯಾಪಕ ಡಾ|| ಸೋಮಶೇಖರ್, ಸ್ವತಂತ್ರ್ಯ ಪದವಿಪೂರ್ವ ಕಾಲೇಜಿನ ಹಿರಿಯ ಉಪನ್ಯಾಸ ಶೇಷಾದ್ರಿ, ವಿದ್ಯಾರ್ಥಿ ಸಂಘದ ಅಧ್ಯಕ್ಷೆ ನಯರಾ ತಾಜ್ ಉಪಸ್ಥಿತರಿದ್ದರು.