ಬೆಂಗಳೂರು : ಯತ್ನಾಳ್ ಹೇಳಿಕೆಗೆ ಬಿಜೆಪಿ ಹಿರಿಯ ನಾಯಕರ ಬೆಂಬಲ ಇದೆ, ಇಲ್ಲದಿದ್ದರೆ ಹೀಗೆ ಬಹಿರಂಗವಾಗಿ ಹೇಳಿಕೆ ನೀಡಲು ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆರೋಪಿಸಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರರಾದ ದೊರೆಸ್ವಾಮಿ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ವಿರುದ್ಧ ನಿನ್ನೆ ವಿಧಾನಸೌಧ ಆವರಣದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಕಾಂಗ್ರೆಸ್ ಪಕ್ಷ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿಕೆಯನ್ನು ಪಕ್ಷಭೇದ ಮರೆತು ಎಲ್ಲರೂ ಖಂಡಿಸಬೇಕು. ಸ್ವಾತಂತ್ರ್ಯ ಯೋಧರಿಗೆ ಗೌರವ ಕೊಡಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ. ಸ್ವಾತಂತ್ರ್ಯ ಹೋರಾಟಗಾರರಿಗೆ ಅಗೌರವ ತೋರಿಸುವುದೇ ನಿಜವಾದ ದೇಶದ್ರೋಹ. ಯತ್ನಾಳ್ ಹೇಳಿಕೆಗೆ ಬಿಜೆಪಿ ಹಿರಿಯ ನಾಯಕರ ಬೆಂಬಲ ಇದೆ, ಇಲ್ಲದಿದ್ದರೆ ಹೀಗೆ ಬಹಿರಂಗವಾಗಿ ಹೇಳಿಕೆ ನೀಡಲು ಸಾಧ್ಯವಿಲ್ಲ. ಪ್ರಚೋದನಾತ್ಮಕ ಹೇಳಿಕೆ ನೀಡಿ ಸೌಹಾರ್ದತೆಯನ್ನು ಹಾಳು ಮಾಡುವ ಯತ್ನಾಳ್, ಅನಂತ್ ಕುಮಾರ್ ಹೆಗಡೆ, ಸಿ.ಟಿ.ರವಿ ಅಂತಹವರು ಸಾರ್ವಜನಿಕ ಜೀವನದಲ್ಲಿರಲು ನಾಲಾಯಕ್.
ಹಿರಿಯರಾದ ದೊರೆಸ್ವಾಮಿ ಅವರು ತಮ್ಮ ಬದುಕಿನುದ್ದಕ್ಕೂ ನಾಡಿನ ಹಿತಕ್ಕಾಗಿ ಹೋರಾಡುತ್ತಾ ಬಂದಿದ್ದಾರೆ. ಇಳಿ ವಯಸ್ಸಿನಲ್ಲೂ ಮನೆಯಲ್ಲಿ ಕುಳಿತವರಲ್ಲ. ಯಾವುದೇ ಜನಪರ ಹೋರಾಟದ ಮುಂದಾಳತ್ವ ವಹಿಸುತ್ತಾರೆ. ನಮ್ಮೆಲ್ಲರಿಗೂ ಮಾರ್ಗದರ್ಶಕರಾಗಿರುವ ಇಂಥವರ ಬಗ್ಗೆ ಮಾತನಾಡುವ ನೈತಿಕತೆ ಯತ್ನಾಳ್ ನಂತಹ ಅಯೋಗ್ಯರಿಗೆಲ್ಲಿದೆ? ದೊರೆಸ್ವಾಮಿಯಂತವರ ತ್ಯಾಗ, ಬಲಿದಾನಗಳಿಂದ ಯತ್ನಾಳ್ನಂತಹವರಿಗೆ ಇಂದು ಧೈರ್ಯವಾಗಿ ಮಾತನಾಡುವ ಸ್ವಾತಂತ್ರ್ಯ ಸಿಕ್ಕಿದೆ. ಅವರು ಬ್ರಿಟಿಷರ ವಿರುದ್ಧ ಹೋರಾಡದೇ ಇದ್ದಿದ್ದರೆ, ಈ ಸ್ವಾತಂತ್ರ್ಯ ಸಿಗುತ್ತಿತ್ತೇ? ಬಿಜೆಪಿಯವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲ್ಲ ಅಂತ ಮುಚ್ಚಳಿಕೆ ಬರೆದುಕೊಟ್ಟ ಸಾವರ್ಕರ್ ಸಂತತಿಯವರು. ಇಂತಹವರು ಸಂವಿಧಾನ, ಗಾಂಧಿ, ನೆಹರು, ಅಂಬೇಡ್ಕರ್, ಮೌಲಾನಾ ಆಜಾದ್ ವಿರುದ್ಧ ಮಾತನಾಡುತ್ತಾರೆ. ಸ್ವಾತ್ರಂತ್ಯ ಹೋರಾಟದ ಪರಂಪರೆ ಏನಿದ್ದರೂ ಕಾಂಗ್ರೆಸ್ನದು ಮಾತ್ರ. ಹಿರಿಯ ಸ್ವಾತಂತ್ರ್ಯ ಹೋರಾಟಗಾರರನ್ನು ಅವಮಾನಿಸಿದ ಬಸವನಗೌಡ ಪಾಟೀಲ್ ಯತ್ನಾಳ್ ಅವರ ಶಾಸನ ಸಭಾ ಸದಸ್ಯತ್ವವನ್ನು ತಕ್ಷಣ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.










