ಚಿಕ್ಕಮಗಳೂರು : ಲಯನ್ಸ್ ಪದಾಧಿಕಾರಿಗಳು ಮತ್ತು ಸದಸ್ಯರು ಸೇವಾವ್ರತಿಗಳಾಗಬೇಕು : ರೆನಾಲ್ಡ್ ಗೋಮ್ಸ್ ಸಲಹೆ

195
firstsuddi

ಚಿಕ್ಕಮಗಳೂರು : ಲಯನ್ಸ್ ಪದಾಧಿಕಾರಿಗಳು ಮತ್ತು ಸದಸ್ಯರು ಸೇವಾವ್ರತಿಗಳಾಗಬೇಕು ಎಂದು ಲಯನ್ಸ್ ಜಿಲ್ಲಾ ರಾಜ್ಯಪಾಲ ರೆನಾಲ್ಡ್ ಗೋಮ್ಸ್ ಸಲಹೆ ಮಾಡಿದರು.
ಚಿಕ್ಕಮಗಳೂರು ಲಯನ್ಸ್ ಸಂಸ್ಥೆ ನೀಡಿದ 70 ಸಾವಿರ ರೂ ಮೌಲ್ಯದ ಊಟದ ಕುರ್ಚಿಗಳನ್ನು ನಗರದ ಜೀವನ ಸಂಧ್ಯಾ ವೃದ್ದಾಶ್ರಮಕ್ಕೆ ಇಂದು ವಿತರಿಸಿ ಅವರು ಮಾತನಾಡಿದರು.
ಅಧಿಕಾರ, ಹಣ, ಅಂತಸ್ತಿನಿಂದ ನಮಗೆ ಬೆಲೆ ಬರುವುದಿಲ್ಲ, ನಾವು ಮಾಡಿದ ಸೇವೆ ಮತ್ತು ತ್ಯಾಗದಿಂದ ನಮ್ಮ ಬದುಕು ಸಾರ್ಥಕವಾಗುವುದರ ಜೊತೆಗೆ ನಮ್ಮ ಹೆಸರು ಜನಮಾನಸದಲ್ಲಿ ಶಾಶ್ವತವಾಗಿ ಉಳಿಯುತ್ತದೆ ಎಂದು ಕಿವಿಮಾತು ಹೇಳಿದರು.
ನಾವು ಗಳಿಸಿದ ಹಣದಲ್ಲಿ ಅಲ್ಪಭಾಗವನ್ನಾದರೂ ಸಮಾಜ ಸೇವೆಗೆ ವಿನಿಯೋಗಿಸಬೇಕು, ದೀನರು, ದುರ್ಬಲರು, ಬಡವರಿಗೆ ನೆರವಿನ ಹಸ್ತ ಚಾಚಬೇಕು, ಲಯನ್ಸ್ ಸದಸ್ಯರು ಮತ್ತು ಪದಾಧಿಕಾರಿಗಳು ಸ್ವಯಂ ಪ್ರೇರಿತ ರಕ್ತದಾನಕ್ಕೆ ಮುಂದಾಗಬೇಕು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಲಯನ್ಸ್ ಅಧ್ಯಕ್ಷ ಸಿ.ಪಿ.ಸುರೇಶ್ ಚಿಕ್ಕಮಗಳೂರು ಲಯನ್ಸ್ ಸಂಸ್ಥೆ ಸಮಾಜ ಸೇವೆಗಾಗಿ ನಿರಂತರವಾಗಿ ದುಡಿಯುತ್ತಿದೆ, ಹಿರಿಯ ನಾಗರೀಕರು, ಬುದ್ದಿಮಾಂದ್ಯ ಮಕ್ಕಳು ಮತ್ತು ವಿಕಲಚೇತನರ ಅಭಿವೃದ್ದಿಗೆ ಕಂಕಣಬದ್ದವಾಗಿದೆ ಎಂದು ಹೇಳಿದರು.
ವೃದ್ದಾಶ್ರಮಕ್ಕೆ 60 ಊಟದ ಕುರ್ಚಿಗಳನ್ನು ಸಮಾರಂಭದಲ್ಲಿ ನೀಡಲಾಯಿತು, ಇದಕ್ಕೂ ಮುನ್ನ ನಗರದ ಎಐಟಿ ಕಾಲೇಜಿನಲ್ಲಿ ಲಯನ್ಸ್ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ 153 ವಿದ್ಯಾರ್ಥಿಗಳು ರಕ್ತದಾನ ಮಾಡಿದರು.
ಲಯನ್ಸ್ ಜಿಲ್ಲಾ ಮಾಜಿ ರಾಜ್ಯಪಾಲ ಹೆಚ್.ಆರ್.ಹರೀಶ್, ರಾಜ್ಯಪಾಲರ ಪ್ರತಿನಿಧಿ ಹೆಚ್.ಸಿ.ಶಶಿಪ್ರಸಾಧ್, ಮಾಜಿ ಅಧ್ಯಕ್ಷ ಎಂ.ಆರ್.ನಾಗರಾಜ್, ಕಾರ್ಯದರ್ಶಿ ಮನೋಜ್ ಬಸವರಾಜ್, ಖಜಾಂಚಿ ಜಯರಾಮೇಗೌಡ, ಅನಿತಾ ಗೋಮ್ಸ್, ಆಶಾಕಿರಣ ಅಂಧಮಕ್ಕಳ ಶಾಲೆಯ ಅಧ್ಯಕ್ಷ ಡಾ|| ಜೆ.ಪಿ.ಕೃಷ್ಣೇಗೌಡ, ಎಐಟಿ ಪ್ರಾಂಶುಪಾಲ ಡಾ|| ಸಿ.ಟಿ.ಜಯದೇವ್, ಹೆಚ್.ಓ.ಡಿ ಡಾ|| ಸತ್ಯನಾರಾಯಣ್ ಉಪಸ್ಥಿತರಿದ್ದರು.