ಮೂಡಿಗೆರೆ : ಪರಂಪರೆ ಕೂಟ ಮತ್ತು ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಪುರಾತನ ಕಾಲದ ಬಾವಿಯ ಸ್ವಚ್ಛತೆ…

312
firstsuddi

ಮೂಡಿಗೆರೆ : ಕಳಸ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪರಂಪರೆ ಕೂಟ ಮತ್ತು ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಶುಕ್ರವಾರ ಪುರಾತನ ಕಾಲದ ಬಾವಿಯೊಂದನ್ನು ಸ್ವಚ್ಛಗೊಳಿಸಲಾಯಿತು.
ಶ್ರೀ ವೆಂಕಟರಮಣ ಸ್ವಾಮಿ ದೇವಾಲಯಕ್ಕೆ ಸೇರಿದ ಪ್ರದೇಶದಲ್ಲಿ ಪುರಾತನ ಕಾಲದ ಸುಮಾರು 500 ವರ್ಷಕ್ಕೂ ಹಳೆಯದಾದ ಬಾವಿಯೊಂದು ಇತ್ತು. ಸ್ಥಳೀಯ ಬಾಲಕೃಷ್ಣ ಪ್ರಭು ಸಹಕಾರದೊಂದಿಗೆ ಪದವಿ ಕಾಲೇಜಿನ ಅಧ್ಯಾಪಕರುಗಳು ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಸೂಕ್ತ ನಿರ್ವಹಣೆಯಿಲ್ಲದೆ ಕಾಲದ ಹೊಡೆತಕ್ಕೆ ಸಿಕ್ಕು ಪಾಳು ಬಿದ್ದಿದ್ದ ಬಾವಿಯೊಂದು ಕಂಡುಬಂದಿತ್ತು. ಗಿಡ ಗಂಟಿಗಳಿಂದ ಮುಚ್ಚಿದ್ದ ಬಾವಿಯು ಪುರಾತನ ಕಾಲದ್ದು ಎಂದು ತಿಳಿದ ನಂತರ ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಅಮೂಲ್ಯವಾದ ಶ್ರಮದಾನದ ಮೂಲಕ ಬಾವಿಯನ್ನು ಶುದ್ಧಗೊಳಿಸಿದ್ದಾರೆ.
ಹವ್ಯಾಸಿ ಇತಿಹಾಸ ಅಧ್ಯಯನಕಾರ ಹೆಚ್.ಆರ್.ಪಾಂಡುರಂಗ ಅವರು ಬಾವಿಯ ನಿರ್ಮಾಣ ಶೈಲಿಯನ್ನು ಗಮನಿಸಿ ಶುದ್ಧಗೊಳಿಸಿರುವ ಬಾವಿಯು ಕೆಳದಿ ಅರಸರ ಕಾಲಕ್ಕೂ ಹಿಂದಿನದ್ದಾಗಿದ್ದು, ವಿಜಯನಗರ ಅರಸರ ಕಾಲದ ಆಳ್ವಿಕೆಯಲ್ಲಿ ಅವಧಿಯಲ್ಲಿ ನಿರ್ಮಾಣವಾಗಿದೆ ಎಂದು ಅಭಿಪ್ರಾಯಪಟ್ಟರು. ಲಿಂಗಾಯಿತ ಸಮುದಾಯದವರು ನೂರಾರು ವರ್ಷಗಳ ಹಿಂದೆ ಕಳಸ ಭಾಗದಲ್ಲಿ ವಾಸವಿದ್ದರು. ಅವರ ಕಾಲದಲ್ಲಿ ಈ ಬಾವಿಯನ್ನು ಬಳಸುತ್ತಿದ್ದ ಬಗ್ಗೆ ಮಾಹಿತಿ ಕಂಡುಬರುತ್ತಿದೆ. ಕಾಲಾನಂತರದಲ್ಲಿ ಅವರು ಇಲ್ಲಿಂದ ನಿರ್ಗಮಿಸಿದ ಬಳಿಕ ಈ ಬಾವಿಯ ಬಳಕೆ ನಿಂತು ಪಾಳು ಬಿದ್ದಂತೆ ಕಾಣುತ್ತಿದೆ. ಆದರೆ ಸೂಕ್ತ ದಾಖಲೆಗಳಿಲ್ಲದ ಕಾರಣ ಅವರೇ ಈ ಬಾವಿಯನ್ನು ಬಳಕೆ ಮಾಡುತ್ತಿದ್ದರು ಎಂದು ಖಚಿತವಾಗಿ ಹೇಳಲು ಕಷ್ಟವಾಗುತ್ತದೆ. ಆದರೆ ಈ ಬಾವಿಯ ನಿರ್ಮಾಣ ಪುರಾತನ ಕಾಲಕ್ಕೆ ಸೇರಿದೆ ಎಂದು ಊಹಿಸಬಹುದಾಗಿದ್ದು ಮುಂದಿನ ದಿನಗಳಲ್ಲಿ ಹೆಚ್ಚಿನ ಅಧ್ಯಯನಕ್ಕೆ ಒಳಪಡಿಸಿದಲ್ಲಿ ಹೆಚ್ಚಿನ ಅನುಕೂಲವಾಗಲಿದೆ ಎಂದರು.
ಬಾವಿಯು ಚಚ್ಚೌಕಾರದಲ್ಲಿ ನಿರ್ಮಾಣವಾಗಿದ್ದು, 25 ಚದರ ಅಡಿ ವಿಸ್ತೀರ್ಣ, 40 ಆಳವನ್ನು ಹೊಂದಿದೆ. ಒಟ್ಟು 7 ಹಂತಗಳನ್ನು ಹೊಂದಿರುವ ಬಾವಿಯು ಕಾಡುಗಲ್ಲಿನಿಂದ ನಿರ್ಮಾಣವಾಗಿದೆ ಹಾಗೂ ಮೇಲ್ಭಾಗದಲ್ಲಿ ಗ್ರಾನೈಟ್ ಕಲ್ಲುಗಳನ್ನು ಅಳವಡಿಸಲಾಗಿದೆ. ಬಾವಿಯು ಬಹಳ ವರ್ಷಗಳಿಂದ ಪಾಳು ಬಿದ್ದಿದ್ದರ ಪರಿಣಾಮ ನೀರಿನ ಸೆಲೆ ಕಡಿಮೆಯಾಗಿ ನೀರು ತಳಮಟ್ಟದಲ್ಲಿದೆ. ಇಂಥಹ ಹಲವಾರು ಸ್ಮಾರಕಗಳು ಕಳಸ ಭಾಗದಲ್ಲಿದ್ದು, ಹುಡುಕಾಟದ ಜೊತೆಗೆ ಸ್ಮಾರಕಗಳ ರಕ್ಷಣೆ ಹಾಗೂ ಅಭಿವೃದ್ಧಿಯ ಅವಶ್ಯಕತೆ ಇದೆ. ನಮ್ಮ ವಿದ್ಯಾರ್ಥಿಗಳು ವಿಷಯ ತಿಳಿದ ಕೂಡಲೇ ಬಾವಿಯ ಸಂರಕ್ಷಣೆಗೆ ಮುಂದಾಗಿರುವುದು ಸಂತಸ ತಂದಿದೆ. ಕಾಲೇಜಿನ ಹಲವು ವಿದ್ಯಾರ್ಥಿಗಳಿಗೆ ಇತಿಹಾಸ ಸ್ಮಾರಕಗಳ ಬಗ್ಗೆ ಹೆಚ್ಚಿನ ಒಲವು ಇರುವುದು ಕಂಡು ಬಂದಿದೆ. ಮುಂದಿನ ದಿನಗಳಲ್ಲಿ ಕೆಲವರಾದರೂ ಸ್ಥಳೀಯರು ಹಾಗೂ ಸರ್ಕಾರದ ಜೊತೆಗೂಡಿ ಇಂಥಹ ಹಲವು ಸ್ಮಾರಕಗಳ ರಕ್ಷಣೆ ಮತ್ತು ವೃದ್ಧಿಯ ಕಡೆ ಗಮನಹರಿಸಬೇಕು ಎಂದು ಕಾಲೇಜಿನ ಪ್ರಾಂಶುಪಾಲ ವಿನಯ್ ಕುಮಾರ್ ಶೆಟ್ಟಿ ಅಭಿಪ್ರಾಯಪಟ್ಟರು.
ಎನ್.ಎಸ್.ಎಸ್ ಉಸ್ತುವಾರಿ ಅಧಿಕಾರಿ ಎನ್.ವಿಶುಕಮಾರ್ ಅವರು ಮಾತನಾಡಿ, ಪುರಾತನ ಬಾವಿಯು ಪಟ್ಟಣದ ಮುಖ್ಯ ರಸ್ತೆಗೆ ಹೊಂದಿಕೊಂಡಿರುವುದರಿಂದ ಆಟವಾಡುವ ಮಕ್ಕಳಿಗೆ, ದನಕರುಗಳಿಗೆ ಅರಿವಿಗೆ ಬಾರದೆ ಅಪಾಯ ತಂದೊಡ್ಡುತ್ತಿತ್ತು. ಶಿಬಿರದಲ್ಲಿ ಪಾಲ್ಗೊಂಡ ಶಿಬಿರಾರ್ಥಿಗಳು ಬಾವಿಯನ್ನು ಶುಚಿಗೊಳಿಸುವುದರ ಜೊತೆಗೆ ಬಾವಿಯ ಸುತ್ತಲೂ ತಾತ್ಕಾಲಿಕ ಬೇಲಿ ನಿರ್ಮಾಣ ಮಾಡಿ ರಕ್ಷಣೆ ಮಾಡಿದ್ದಾರೆ. ಸ್ಥಳೀಯರು ಹೆಚ್ಚಿನ ಮುತುವರ್ಜಿ ವಹಿಸಿ ಈ ಅಭೂತ ಪೂರ್ವ ಸ್ಮಾರಕವನ್ನು ಅಭಿವೃದ್ಧಿಗೊಳಿಸಬೇಕು ಎಂದು ಮನವಿ ಮಾಡಿದರು. ಸ್ವಚ್ಛತಾ ಕಾರ್ಯಕ್ರಮದಲ್ಲಿ ಬಾಲಕೃಷ್ಣ ಪ್ರಭು, ರೋವರ್ಸ್ ರೇಂಜರ್ಸ್ ಘಟಕದ ಸಂಚಾಲಕ ಸುಧೀರ್ ಜೈನ್ ಸೇರಿದಂತೆ ಎನ್.ಎಸ್.ಎಸ್ ಶಿಬಿರದ ವಿದ್ಯಾರ್ಥಿಗಳು ಹಾಗೂ ಸ್ಥಳೀಯರು ಪಾಲ್ಗೊಂಡಿದ್ದರು.