ಬಳ್ಳಾರಿ : ಮದ್ಯದ ಅಮಲಿನಲ್ಲಿ ಕುಡುಕನೋರ್ವ ತನ್ನ ಮನೆಗೆ ಬೆಂಕಿ ಹಾಕಿರುವ ಘಟನೆ ಜಿಲ್ಲೆಯ ಕೊಳ್ಳೆಗಲ್ಲು ಗ್ರಾಮದ ಶ್ರೀರಾಮುಲು ನಗರದಲ್ಲಿ ನಡೆದಿದೆ. ಚಿದಾನಂದ ಮದ್ಯದ ಅಮಲಿನಲ್ಲಿ ಮನೆಗೆ ಬೆಂಕಿ ಹಚ್ಚಿದ್ದಾರೆ. ಬಾರ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಚಿದಾನಂದ ಅವರು ನಿನ್ನೆ ತಡರಾತ್ರಿ ಮನೆಗೆ ಕಂಠಪೂರ್ತಿ ಕುಡಿದು ಬಂದು ಮನೆಯೊಳಗಿದ್ದ ಬಟ್ಟೆಗಳಿಗೆ ಬೆಂಕಿ ಹಚ್ಚಿದ್ದು, ಪರಿಣಾಮ ಇಡೀ ಮನೆಯ ಒಳಗೆ ಇದ್ದ ಬಟ್ಟೆಗಳು ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಚಿದಾನಂದ ಅವರ ಪತ್ನಿ ಶಾಂತಮ್ಮ ಅವರು ಅಗಸಗಿರಿ ಕೆಲಸವನ್ನು ಮಾಡುತ್ತಿದ್ದು, ಬೇರೆಯವರ ಮನೆಯಿಂದ ತೊಳೆಯಲು ತಂದಿಟ್ಟ ಬಟ್ಟೆಗಳೂ ಕೂಡಾ ಪತಿಯ ರಂಪಾಟದಿಂದ ಸುಟ್ಟು ಹೋಗಿವೆ ಎನ್ನಲಾಗಿದ್ದು, ಈ ಕುರಿತು ಪ್ರತಿಕ್ರಿಯೆ ನೀಡಿದ ಪತ್ನಿ ಶಾಂತಮ್ಮ ಅವರು, ನನ್ನ ಗಂಡ ಬಾರ್‍ನಲ್ಲಿ ಕೆಲಸ ಮಾಡಿ ರಾತ್ರಿ ಕಂಠಪೂರ್ತಿ ಕುಡಿದು ಬಂದು ಈ ಕೃತ್ಯ ಎಸಗಿದ್ದು, ಮನೆಯೊಳಗಿರುವ ಎಲ್ಲಾ ವಸ್ತುಗಳು ಸುಟ್ಟು ಹೋಗಿವೆ ಎಂದು ಅಳಲನ್ನು ತೋಡಿಕೊಂಡಿದ್ದಾರೆ.










