ಮೂಡಿಗೆರೆ : ಪತ್ರಕರ್ತರಿಗೂ ನೆರವಿನ ಪ್ಯಾಕೇಜ್ ನೀಡಲು ಒತ್ತಾಯ…

266
firstsuddi

ಬಣಕಲ್ : ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಘೋಷಿಸಿರುವ ಶ್ರಮಿಕರ ಪ್ಯಾಕೇಜಿನಲ್ಲಿ ಪತ್ರಕರ್ತರು, ಪತ್ರಿಕಾ ವಿತರಕರಿಗೂ ನೆರವು ನೀಡಬೇಕು ಎಂದು ಮೂಡಿಗೆರೆ ತಾಲ್ಲೂಕು ಬಿಜೆಪಿ ಯುವ ಮೋರ್ಚ ಅಧ್ಯಕ್ಷ ಸಂಜಯ್ ಗೌಡ ಕೊಟ್ಟಿಗೆಹಾರ ಒತ್ತಾಯಿಸಿದರು.
ಕೊಟ್ಟಿಗೆಹಾರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪತ್ರಕರ್ತರು ಕೊರೊನಾ ಸೋಂಕಿನ ಜನ ಜಾಗೃತಿಯ ಜೊತೆಗೆ ಕಷ್ಟದಲ್ಲಿ ಸಿಲುಕಿರುವ ಬಡವರಿಗೂ ತಮ್ಮ ಉತ್ತಮ ವರದಿಗಳ ಮೂಲಕ ನೆರಳಾಗಿದ್ದಾರೆ.
ಅವರ ವಸ್ತುನಿಷ್ಠ ವರದಿಗಳು ಸಮಾಜದಲ್ಲಿ ಸಾಮಾಜಿಕ ಕಳಕಳಿಯ ಜೊತೆಗೆ ಉತ್ತಮ ಸ್ವಾಸ್ಥ್ಯ ಕಾಪಾಡುವಲ್ಲಿ ನೆರವಾಗಿವೆ. ಸಮಾಜದ ಓರೆಕೋರೆಗಳನ್ನು ತಿದ್ದುವ ಕೆಲಸ ಆಗುವುದರ ಜೊತೆಗೆ ಗ್ರಾಮದ ಅಭಿವೃದ್ಧಿಗೂ ಪ್ರೇರಣೆಯಾಗಿದ್ದಾರೆ.
ಕೊರೊನಾ ಸೋಂಕಿನ ಜಾಗೃತಿ ಮೂಡಿಸುವ ಯಾವುದೇ ವರದಿಗಳಾಗಲಿ, ಇತರೆ ಉತ್ತಮ ವರದಿಗಳಾಗಲಿ ಸಮಾಜಕ್ಕೆ ತಲುಪುವಲ್ಲಿ ಇವರ ಸೇವೆ ಅಪಾರವಾಗಿದೆ. ಕೊರೊನಾ ಸಮಯದಲ್ಲಿ ಹೆಚ್ಚು ಸಮಯವನ್ನು ಮೀಸಲಿಟ್ಟು ಊಟದ ವ್ಯವಸ್ಥೆಗೆ ತೊಂದರೆಯಾದರೂ ಲೆಕ್ಕಿಸದೆ ವರದಿ ಮಾಡಿದ್ದಾರೆ.
ಮುಖ್ಯಮಂತ್ರಿಗಳು ಪತ್ರಕರ್ತರ ಕಷ್ಟಗಳನ್ನು ಅರಿತು, ಅವರ ಕಷ್ಟಕ್ಕೆ ಸ್ಪಂಧಿಸಬೇಕು. ಜಿಲ್ಲೆಯಾದ್ಯಂತ ಅರೆಕಾಲಿಕ ಅತ್ರಕರ್ತರು ಹಲವರಿದ್ದಾರೆ. ಅನೇಕರು ಪತ್ರಿಕೆಯನ್ನೇ ನಂಬಿ ಯಾವುದೇ ಆದಾಯ ಮೂಲವಿಲ್ಲದೇ ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ. ಇನ್ನು ಪತ್ರಿಕಾ ವಿತರಣೆ ಮಾಡುವವರೂ ಕೊರೊನಾ ಸೋಂಕಿನ ನಡುವೆಯೂ ಮನೆಮನೆಗೆ ಪತ್ರಿಕೆ ಹಾಕುವ ಮೂಲಕ ಸುದ್ದಿಯನ್ನು ಮುಟ್ಟಿಸುವಲ್ಲಿ ಶ್ರಮಿಸುತ್ತಿದ್ದಾರೆ.
ಅದರಲ್ಲೂ ಗ್ರಾಮೀಣ ಪತ್ರಕರ್ತರ ಕಷ್ಟಗಳು ನೂರೆಂಟು ಇದ್ದು, ಜೀವನ ನಿರ್ವಹಣೆ ಕಷ್ಟಸಾಧ್ಯವಾಗಿದೆ. ಇವರ ಸೇವಾ ಮನೋಭಾವವನ್ನು ಗಣನೆಗೆ ತೆಗೆದುಕೊಂಡು ಸರ್ಕಾರ ಪತ್ರಕರ್ತರು ಹಾಗೂ ಪತ್ರಿಕಾ ವಿತರಕರಿಗೆ ನೆರವಿನ ಪ್ಯಾಕೇಜ್ ನೀಡುವಂತೆ ಅವರು ಆಗ್ರಹಿಸಿದ್ದಾರೆ.