ಚಿಕ್ಕಮಗಳೂರು : ವೃತ್ತಿ ಜೀವನದಲ್ಲಿ ಶ್ರದ್ದೆ ಮತ್ತು ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಿದವರು ಜನಮಾನಸದಲ್ಲಿ ಚಿರಸ್ಥಾಯಿಯಾಗಿ ಉಳಿಯುತ್ತಾರೆ : ರವಿಕುಮಾರ್.

218
firstsuddi

ಚಿಕ್ಕಮಗಳೂರು : ವೃತ್ತಿ ಜೀವನದಲ್ಲಿ ಶ್ರದ್ದೆ, ಬದ್ದತೆ ಮತ್ತು ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಿದವರು ಜನಮಾನಸದಲ್ಲಿ ಚಿರಸ್ಥಾಯಿಯಾಗಿ ಉಳಿಯುತ್ತಾರೆ ಎಂದು ತಾಲ್ಲೂಕು ಕ್ರೀಡಾಧಿಕಾರಿ ರವಿಕುಮಾರ್ ಹೇಳಿದರು.
ನಗರದ ಆಜಾದ್‍ಪಾರ್ಕ್ ಕನ್ನಡ ಶಾಲೆಯಲ್ಲಿ ಜಿಲ್ಲಾ ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಕರ ಸಂಘ ಏರ್ಪಡಿಸಿದ್ದ ಸೇವೆಯಿಂದ ನಿವೃತ್ತರಾದ ದಂಟರಮಕ್ಕಿ ಶಾಲೆಯ ಶಿಕ್ಷಕ ಕಾಳಯ್ಯ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದ ವೃತ್ತಿ, ಮಕ್ಕಳನ್ನು ಶಿಕ್ಷಣವಂತರನ್ನಾಗಿಸುವ ಮೂಲಕ ದೇಶವನ್ನು ಕಟ್ಟುವ ಶಕ್ತಿ ಶಿಕ್ಷಕರಿಗಿದೆ, ಅವರು ತಮ್ಮ ವೃತ್ತಿಯನ್ನು ಸೇವೆಯೆಂದು ಪರಿಗಣಿಸಿ ಶ್ರದ್ದೆ, ಬದ್ದತೆ ಮತ್ತು ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸಿದರೆ ಮಾತ್ರ ಸಾಕ್ಷರತೆಯಲ್ಲಿ ರಾಷ್ಟ್ರ ಪ್ರಗತಿ ಸಾಧಿಸುತ್ತದೆ ಎಂದರು.
ಕ್ರೀಡಾ ಕೂಟಗಳು ಸೇರಿದಂತೆ ಶಿಕ್ಷಣ ಇಲಾಖೆಯ ಕಾರ್ಯ ಚಟುವಟಿಕೆಗಳಲ್ಲಿ ನಿವೃತ್ತ ದೈಹಿಕ ಶಿಕ್ಷಕ ಕಾಳಯ್ಯನವರು ನೀಡಿರುವ ಸಹಕಾರ ಮತ್ತು ಪ್ರೋತ್ಸಾಹ ಅವಿಸ್ಮರಣೀಯ ಎಂದು ತಿಳಿಸಿದರು.
ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ಎಸ್.ಈ.ಲೋಕೇಶ್ವರಾಚಾರ್ ಮಾತನಾಡಿ ಕಾಳಯ್ಯನವರು ಸೇವೆಯಿಂದ ನಿವೃತ್ತರಾಗಿದ್ದರೂ ತಾಲ್ಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಮುಂದುವರೆಯುತ್ತಾರೆ ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ಶಿಕ್ಷಕ ಕಾಳಯ್ಯ 35 ವರ್ಷಗಳ ಸೇವೆ ತಮಗೆ ಅತ್ಯಂತ ತೃಪ್ತಿ ತಂದಿದ್ದು, ಎಲ್ಲರ ಸಹಕಾರದಿಂದ ಶಿಕ್ಷಕ ವೃತ್ತಿ ಮತ್ತು ಸಂಘದ ಕಾರ್ಯವನ್ನು ನಡೆಸಲು ಸಾಧ್ಯವಾಯಿತು ಎಂದು ತಿಳಿಸಿದರು.
ಸೇವೆಯಿಂದ ನಿವೃತ್ತರಾದ ಕಾಳಯ್ಯ ಅವರನ್ನು ಸಮಾರಂಭದಲ್ಲಿ ಸಂಘದ ವತಿಯಿಂದ ಸನ್ಮಾನಿಸಲಾಯಿತು, ಸಂಘದ ಜಿಲ್ಲಾಧ್ಯಕ್ಷ ಮಹೇಶಪ್ಪ, ಸಂಘಟನಾ ಕಾರ್ಯದರ್ಶಿ ತಿಪ್ಪೇರುದ್ರಪ್ಪ, ತಾಲ್ಲೂಕು ಖಜಾಂಚಿ ಕುಮಾರಸ್ವಾಮಿ, ಭಾರತ ಸೇವಾದಳದ ಜಿಲ್ಲಾ ಸಂಘಟಕ ಚಂದ್ರಕಾಂತ್, ಶಿಕ್ಷಕರಾದ ಗಿರೀಶ್ ವಾಸುದೇವರಾಜ ಅರಸ್ ಉಪಸ್ಥಿತರಿದ್ದರು.