ಮೂಡಿಗೆರೆ : ಜನತೆ ತಮ್ಮ ಪ್ರಾಣ ಹಾಗೂ ಕುಟುಂಬ ರಕ್ಷಣೆ ದೃಷ್ಟಿಯಿಂದ ಸ್ವಯಂ ಆಗಿ ತಂಬಾಕಿನ ಸಹವಾಸದಿಂದ ದೂರವಾಗಬೇಕು : ಮಗ್ಗಲಮಕ್ಕಿ ಗಣೇಶ್.

312
firstsuddi

ಮೂಡಿಗೆರೆ: ತಂಬಾಕು ಸೇವನೆಯಿಂದ ಸರಕಾರಕ್ಕೆ ಸಂಪನ್ಮೂಲ ಕ್ರೂಡೀಕರಣಗೊಳ್ಳುತ್ತಿರುವಾಗ ಅದನ್ನು ನಿಷೇಧಿಸುವ ಗೋಜಿಗೆ ಸರಕಾರ ಮುಂದಾಗುತ್ತಿಲ್ಲ. ಜನತೆ ತಮ್ಮ ಪ್ರಾಣ ಹಾಗೂ ಕುಟುಂಬ ರಕ್ಷಣೆ ದೃಷ್ಟಿಯಿಂದ ತಮ್ಮ ಜವಾಬ್ದಾರಿಯನ್ನು ತಿಳಿದು ಸ್ವಯಂ ಆಗಿ ತಂಬಾಕಿನ ಸಹವಾಸದಿಂದ ದೂರವಾಗಬೇಕೆಂದು ಕಸಾಪ ಅಧ್ಯಕ್ಷ ಮಗ್ಗಲಮಕ್ಕಿ ಗಣೇಶ್ ಹೇಳಿದರು.
ಪಟ್ಟಣದ ಛತ್ರಮೈಧಾನದ ವಿನಾಯಕ ಎಂಬುವರ ಮನೆಯಲ್ಲಿ ಜೇಸಿಐ ವತಿಯಿಂದ ವಿಶ್ವ ತಂಬಾಕು ರಹಿತ ದಿನದ ಅಂಗವಾಗಿ ಏರ್ಪಡಿಸಿದ್ದ ಪರಿವರ್ತನ ಪ್ರಯತ್ನ ಎಂಬ ವಿಚಾರ ಸಂಕೀರಣ ಉದ್ಘಾಟಿಸಿ ಮಾತನಾಡಿದರು. ನಿರಂತರವಾಗಿ ತಂಬಾಕು ಉಪಯೋಗಿಸುವುದರಿಂದ ಕ್ಯಾನ್ಸ್‍ರ್‍ನಂತಹ ಮಾರಕ ಕಾಯಿಲೆಗಳು ಆವರಿಸುವ ಅಪಾಯವಿದೆ ಎಂಬ ವೈದ್ಯಕೀಯ ಎಚ್ಚರಿಕೆಯನ್ನು ಜನ ಲೆಕ್ಕಿಸುತ್ತಿಲ್ಲ. ಇಂತಹ ಧೋರಣೆಯಿಂದ ಹೊರ ಬಂದು ತಂಬಾಕು ಜಗಿಯುವುದನ್ನು ನಿಲ್ಲಿಸಿದಾಗ ಮಾತ್ರ ಉತ್ತಮ ಆರೋಗ್ಯ ಹಾಗೂ ಪರಿಸರ ನಾಶಕ್ಕೆ ಮುಕ್ತಿ ದೊರಕಲಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜೇಸಿಐ ಅಧ್ಯಕ್ಷ ರವಿಕುಮಾರ್ ಮಾತನಾಡಿ, ತಂಬಾಕು, ಗುಟುಕಾ, ಬೀಡಿ, ಸಿಗರೇಟ್, ಮದ್ಯಪಾನದಂತಹ ದುಶ್ಚಟಗಳಿಗೆ ಬಲಿಯಾಗಿ ಅನೇಕ ಕುಟುಂಬಗಳು ಬೀದಿಗೆ ಬಂದಿವೆ. ದುಶ್ಚಟವನ್ನು ಮೈಗೂಡಿಸಿಕೊಳ್ಳದೇ ಅದರಿಂದ ದೂರವಿದ್ದಾಗ ಸಮಾಜದಲ್ಲಿ ಗೌರವದ ಜತೆಗೆ ಉತ್ತಮ ಜೀವನ ನಡೆಸಲು ಸಾಧ್ಯವಿದೆ ಎಂದು ತಿಳಿಸಿದರು.
ಮುಖಂಡರಾದ ಅಮೀದ್ ಸಬ್ಬೇನಹಳ್ಳಿ, ಕ.ದಾ.ಕೃಷ್ಣರಾಜ್ ಅರಸ್, ಉದಯ್, ಜೆಜೆಸಿ ಶ್ರಾವ್ಯ, ಆಶಾ, ನರಸಿಂಹ ಟೈಲರ್ ಮತ್ತಿತರರಿದ್ದರು.