ಕೊಟ್ಟಿಗೆಹಾರ: ಕೊಡಗು ಹಾಗೂ ಚಿಕ್ಕಮಗಳೂರು ಜಿಲ್ಲೆಯ ನೆರೆಪೀಡಿತ ಪ್ರದೇಶಗಳಿಗೆ ಬೇಟಿ ನೀಡಿ ಸಮಗ್ರ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಹೇಳಿದರು.
ಮೂಡಿಗೆರೆ ತಾಲ್ಲೂಕಿನ ನೆರೆಪೀಡಿತ ಪ್ರದೇಶಗಳಾದ ಚೆನ್ನಹಡ್ಲು, ದೇವನಗೂಲ್ ಗುಡ್ಡ, ಸುಂದರಬೈಲ್, ಬಾಳೂರು ಹೊರಟ್ಟಿ, ಮಲೆಮನೆ, ಮಧುಗುಂಡಿ ಗ್ರಾಮಗಳಿಗೆ ಬೇಟಿ ನೀಡಿ ಅವರು ಮಾತನಾಡಿದರು.
ಸರ್ಕಾರವೂ ಭೂಕುಸಿತ ಪ್ರಧೇಶದ ಬಗ್ಗೆ ಸಮಿತಿ ನಿಯುಕ್ತಿ ಮಾಡಿದೆ. ಮುಖ್ಯವಾಗಿ ಭೂಕುಸಿತವಾದ ಸ್ಥಳಗಳಿಗೆ ಬೇಟಿ ನೀಡಿ ತಜ್ಞರು ಹಾಗೂ ಸ್ಥಳೀಯರೊಡನೆ ಸಮಾಲೋಚನೆ ನಡೆಸಿ ಮಾಹಿತಿ ಕಲೆ ಹಾಕಿ ಮತ್ತು ಸ್ಥಾನೀಕ ವಿಭಾಗೀಯ ಅದಿಕಾರಿಗಳ ಜೊತೆ ಆಳ ಚರ್ಚೆ ನಡೆಸಿ ಸರಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಮಲೆಮನೆಯ ನೆರೆ ಸಂತ್ರಸ್ತರು ಅನಂತ ಹೆಗಡೆ ಆಶೀಸರ ಅವರೊಡನೆ ತಮ್ಮ ಅಳಲನ್ನು ತೋಡಿಕೊಂಡರು. ಮಲೆಮನೆ ಗ್ರಾಮದ ನೆರೆಸಂತ್ರಸ್ತ ಎಂ.ಎನ್.ಅಶ್ವಥ್ ಮಾತನಾಡಿ, ರಾಜ್ಯದ ಮುಖ್ಯ ಮಂತ್ರಿಯಿಂದ ಹಿಡಿದು ಸಚಿವರಾದಿ ವರೆಗೆ ಎಲ್ಲರೂ ಭೂಕುಸಿತ ಪ್ರದೇಶಕ್ಕೆ ಬೇಟಿ ನೀಡಿ ಆಶ್ವಾಸನೆ ನೀಡಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಸರ್ಕಾರ ಐದು ತಿಂಗಳ ಬಾಡಿಗೆಯನ್ನಷ್ಟೆ ನೀಡಿದೆ. ನಮಗೆ ಪರ್ಯಾಯ ಭೂಮಿ ಸಿಗದೇ ಸಂಕಷ್ಟಕ್ಕೀಡಾಗಿದ್ದೇವೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು ಯಾರನ್ನೂ ನಿರ್ಲಕ್ಷ್ಯ ಮಾಡುವ ಉದ್ದೇಶವಿಲ್ಲ. ಪರ್ಯಾಯ ಭೂಮಿಗೆ ಮಲೆನಾಡು ಭಾಗದಲ್ಲಿ ಜಾಗದ ಸಮಸ್ಯೆಯಿದೆ. ಬಯಲುಸೀಮೆ ಕಡೂರು ಸುತ್ತಮುತ್ತ ಪ್ರದೇಶಗಳಲ್ಲಿ ಜಮೀನು ಇದೆ. ಆದರೆ ಅಲ್ಲಿಗೆ ಹೋಗಲು ಒಪ್ಪಿದರೆ ಸರಕಾರ ವ್ಯವಸ್ಥೆಗೆ ನಾವು ಶಿಪಾರಸ್ಸು ಮಾಡುತ್ತೇವೆ. ಜಿಲ್ಲಾದಿಕಾರಿಗಳು ಹಾಗೂ ಕಂದಾಯ, ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪರ್ಯಾಯ ವ್ಯವಸ್ಥೆಗೆ ಚಿಂತನೆ ನಡೆಸಲಾಗುವುದು. ಸಂಬಂಧಿಸಿದ ಸ್ಥಳೀಯ ಅಧಿಕಾರಿಗಳ ಜೊತೆ ಮಾಹಿತಿ ಕಲೆ ಹಾಕಿ ಪರಿಸರ ವೈವಿಧ್ಯತೆಯ ಸಂರಕ್ಷಣೆ ಬಗ್ಗೆ ಚಿಂತಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಗಣಿ ಮತ್ತು ಜಿಯೋಲೋಜಿಯ ಸಿ.ವಿ.ರಾಮನ್, ರಮೇಶ್, ಪರಿಸರ ವಿಜ್ಞಾನಿ ಕೇಶವ ಕರ್ಸೆ, ಭಾರತೀಯ ವಿಜ್ಞಾನ ವಿಭಾಗದ ಭರತ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮುದ್ದಣ್ಣ, ಜಿಲ್ಲಾ ಗಣಿ ವಿಜ್ಞಾನಿ ವಿಂದ್ಯಾ, ಡಿವೈಎಸ್ಪಿ ಬಸಪ್ಪ ಅಂಗಡಿ, ಎಎಸ್ಪಿ ಶೃತಿ, ಮೂಡಿಗೆರೆ ತಹಸೀಲ್ದಾರ್ ಎಚ್.ಎಸ್.ರಮೇಶ್, ತಾಲ್ಲೂಕು ಕಾರ್ಯನಿರ್ವಹಣಾಧಿಕಾರಿ ಎಂ.ವೆಂಕಟೇಶ್, ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.










