ಮೂಡಿಗೆರೆ: ಇಲ್ಲಿನ ಎಂಜಿಎಂ ಸರ್ಕಾರಿ ಆಸ್ಪತ್ರೆಯಲ್ಲಿ ಸರ್ಜನ್ ಆಗಿ ಕಾರ್ಯ ನಿರ್ವಹಣೆ ಮಾಡುತ್ತಿರುವ ಡಾ.ಸಂತೋಷ್ ಅರಸ್.ಕೆ.ಎಸ್ ಅವರ ಮೇಲೆ ಸ್ಥಳೀಯನೊಬ್ಬ ಕೆಲವರೊಂದಿಗೆ ಸೇರಿಕೊಂಡು ಹಲ್ಲೆ ಮಾಡಿದ್ದು ತಾಲ್ಲೂಕಿನಾದ್ಯಂತ ವ್ಯಾಪಕ ಪ್ರತಿರೋಧ ವ್ಯಕ್ತವಾಗಿದೆ.
ಬುಧವಾರದಂದು ಎಂದಿನಂತೆ ವೈದ್ಯಾಧಿಕಾರಿ ಸಂತೋಷ್ ಅವರು ಕಾರ್ಯನಿರತರಾಗಿದ್ದಾಗ, ಜೆ.ಎಂ.ರಸ್ತೆಯ ನಿವಾಸಿ ಅಹಮದ್(28) ಎಂಬಾತ ತನ್ನ ತಂದೆಯನ್ನು ಚಿಕೆತ್ಸೆಗೆಂದು ಮೂಡಿಗೆರೆಯ ಎಂ.ಜಿ.ಎಂ ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ಏಕಾಏಕಿ ಕ್ಯಾಬಿನ್ ಒಳಗೆ ನುಗ್ಗಿ ರೋಗಿಗೆ ಪರಿಶೀಲಿಸುವಂತೆ ಆರೋಪಿ ಹೇಳಿದಾಗ, ಆಸ್ಪತ್ರೆಯ ನಿಯಮದಂತೆ ಹೊಸ ಚೀಟಿ ಮಾಡಿಕೊಂಡು ಬರಲು ತಿಳಿಸಿದ್ದಾರೆ. ಇದಕ್ಕೆ ಕೋಪಗೊಂಡ ಆರೋಪಿ ಅಹಮದ್ ಸಂತೋಷ್ ಅವರಿಗೆ ಕೆಟ್ಟ ಪದಗಳನ್ನು ಬಳಸಿ ಬೈದು ನಿಂದಿಸಿ ಹೋಗಿದ್ದು, ಕೆಲ ಸಮಯದ ನಂತರ ಐವರು ಜೊತೆಗಾರರನ್ನು ಕರೆದುಕೊಂಡು ಬಂದು ಪುನಃ ಕೆಟ್ಟ ಪದಗಳಲ್ಲಿ ನಿಂದಿಸಿ ದೈಹಿಕವಾಗಿ ಹಲ್ಲೆ ನಡೆಸಿದ್ದಾನೆ. ಆರೋಪಿ ಅಹಮದ್ ಮೂಡಿಗೆರೆಯ ಲಯನ್ಸ್ ವೃತ್ತದಲ್ಲಿ ಮೊಬೈಲ್ ಅಂಗಡಿ ನಡೆಸುತ್ತಿದ್ದು, ಈ ಸಂಬಂಧ ವೈದ್ಯಾಧಿಕಾರಿ ಸಂತೋಷ್ ಅವರು ಕೂಡಲೇ ಮೂಡಿಗೆರೆ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಮೂಡಿಗೆರೆ ಪೋಲಿಸ್ ಠಾಣೆಯಲ್ಲಿ ಆರೋಪಿ ಅಹಮದ್ ಸೇರಿದಂತೆ ಐವರ ಮೇಲೆ ಕೇಸು ದಾಖಲಿಸಿದ್ದಾರೆ.
ಕೊರೋನಾ ಸಂಕಷ್ಟದ ನಡುವೆ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ತಮ್ಮ ಜೀವವನ್ನೂ ಲೆಕ್ಕಿಸದೆ ಹಗಲಿರುಳೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಂತಹವರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದೂ ಅಲ್ಲದೆ ದೈಹಿಕವಾಗಿ ಹಲ್ಲೆ ಮಾಡಿದ್ದು ಅಕ್ಷಮ್ಯ ಅಪರಾಧ. ಇಂಥಹವರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಸ್ಥಳೀಯರು ಸೇರಿದಂತೆ ಹಲವು ಪ್ರಗತಿಪರ ಸಂಘಟನೆಗಳು ಒತ್ತಾಯ ಮಾಡಿವೆ.










