ಉಡುಪಿಯ ಆಶಾ ಕಾರ್ಯಕರ್ತೆಯ ನಿಸ್ವಾರ್ಥ ಸೇವೆ ಶ್ಲಾಘನೀಯ-ಕನ್ನಡದಲ್ಲಿ ಉಪ ರಾಷ್ಟ್ರಪತಿ ಪ್ರಶಂಸೆ…

265
firstsuddi

ಉಡುಪಿ : ದೇಶಾದ್ಯಂತ ಮಹಾಮಾರಿ ಕೊರೊನಾ ವೈರಸ್ ತನ್ನ ಆರ್ಭಟ ಹೆಚ್ಚಿಸುತ್ತಲೇ ಇದ್ದು, ಇಂತಹ ಕ್ಲಿಷ್ಠಕರ ಸಮಯದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಉಡುಪಿ ಆಶಾ ಕಾರ್ಯಕರ್ತೆಯ ಸೇವೆಗೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ತಮ್ಮ ಟ್ವಿಟರ್‍ನಲ್ಲಿ ಕನ್ನಡದಲ್ಲಿ ಟ್ವೀಟ್ ಮಾಡುವ ಮೂಲಕ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಆಶಾ ಕಾರ್ಯಕರ್ತೆ ಶ್ರೀಮತಿ ರಾಜೀವಿ ಅವರು ತಮ್ಮ ಗ್ರಾಮದ ಸೇವೆಯ ಜೊತೆಗೆ ತಮ್ಮ ಜೀವನಕ್ಕಾಗಿ ಆಟೋವನ್ನು ಚಲಾಯಿಸುತ್ತಾರೆ. ಇತ್ತೀಚೆಗೆ ಸಂಕಷ್ಟದಲ್ಲಿದ್ದ ಗರ್ಭಿಣಿ ಮಹಿಳೆಯೋರ್ವರನ್ನು ಬೆಳಗ್ಗಿನ ಜಾವ 3 ಗಂಟೆ ಸಮಯದಲ್ಲಿ ತಮ್ಮ ಆಟೋದಲ್ಲಿ ಆಸ್ಪತ್ರೆಗೆ ಸಾಗಿಸಿದ್ದರು. ಈಗ ಈ ವಿಷಯ ಉಪರಾಷ್ಟ್ರಪತಿಗಳ ಗಮನಕ್ಕೆ ಬಂದಿದ್ದು, ತಮ್ಮ ಟ್ವಿಟರ್‍ನಲ್ಲಿ ಕನ್ನಡದಲ್ಲಿ ಬರೆದುಕೊಳ್ಳವ ಮೂಲಕ ರಾಜೀವಿ ಅವರ ಸೇವೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಟ್ವಿಟರ್ ನಲ್ಲಿ, ಕರ್ನಾಟಕದ ಉಡುಪಿಯಲ್ಲಿ ಬೆಳಗಿನ ಜಾವ 3 ಗಂಟೆಯಲ್ಲಿ ಗರ್ಭಿಣಿ ಮಹಿಳೆಯನ್ನು ತಮ್ಮ ಆಟೋರಿಕ್ಷಾದಲ್ಲಿ ಆಸ್ಪತ್ರೆಗೆ ಕರೆದೊಯ್ದ ಆಶಾ ಕಾರ್ಯಕರ್ತೆ ಶ್ರೀಮತಿ ರಾಜೀವಿ ಅವರ ಉದಾತ್ತ ಕಾರ್ಯವನ್ನು ಶ್ಲಾಘಿಸುತ್ತೇನೆ. ತಮ್ಮ ಬಿಡುವಿನ ವೇಳೆಯಲ್ಲಿ ಆಟೋ ಚಲಾಯಿಸುವ ಶ್ರೀಮತಿ ರಾಜೀವಿ ಅವರು ಗರ್ಭಿಣಿಯರಿಗೆ ಉಚಿತ ಸವಾರಿಯ ಸೇವೆ ಒದಗಿಸುತ್ತಿರುವುದು ಎಲ್ಲರಿಗೂ ಸ್ಫೂರ್ತಿದಾಯಕವಾಗಿದೆ. ದೇವರು ಆಕೆಗೆ ಮಂಗಳವನ್ನುಂಟು ಮಾಡಲಿ! ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.