ಸರ್ಕಾರಿ ಶಾಲೆಗಳ ವೈಫಲ್ಯಕ್ಕೆ ಬಿಜೆಪಿ ಹೊಣೆ : ಮಾಜಿ ಸಚಿವ ಯು.ಟಿ ಖಾದರ್…

157
firstsuddi

ಮಂಗಳೂರು : ಅಧಿಕಾರದಲ್ಲಿರುವ ಬಿಜೆಪಿ ತನ್ನೊಳಗಿನ ಆಂತರಿಕ ಯುದ್ಧದಲ್ಲಿ ಮುಳುಗಿರುವಾಗ, ರಾಜ್ಯದ ಇಡೀ ಶೈಕ್ಷಣಿಕ ವ್ಯವಸ್ಥೆ ಪಾತಾಳಕ್ಕೆ ಕುಸಿದು ಬಿದ್ದಿದೆ. ಸಾಂಕ್ರಾಮಿಕ ರೋಗದ ಮಧ್ಯೆದಲ್ಲಿ ಪರೀಕ್ಷೆ ಎದುರಿಸುವಂತೆ ಮಕ್ಕಳ ಮೇಲೆ ಒತ್ತಡ ಹೇರುವುದರಿಂದ ಹಿಡಿದು, ಮತ್ತೆ ಶಾಲೆ ಆರಂಭಿಸಲು ಯಾವುದೇ ಯೋಜನೆಯಿಲ್ಲದೆ, ಅಸಂಖ್ಯಾತ ಮಕ್ಕಳ ಭವಿಷ್ಯದಲ್ಲಿ ಇಂದು ಅಂಧಕಾರ ಮೂಡಿದೆ. ಅದರಲ್ಲೂ ಸರ್ಕಾರಿ ಶಾಲಾ ಮಕ್ಕಳ ಪರಿಸ್ಥಿತಿ ಹೀನಾಯವಾಗಿದ್ದು, ಬಡವರ ಮಕ್ಕಳಿಗೆ ಶಿಕ್ಷಣ ಒದಗಿಸಲು ಸರ್ಕಾರದ ಬಳಿ ಯಾವುದೇ ಯಾವುದೇ ಇಲ್ಲವಾಗಿದೆ ಎಂದು ಮಾಜಿ ಸಚಿವ ಯು.ಟಿ. ಖಾದರ್ ಅವರು ಆರೋಪಿಸಿದ್ದಾರೆ.
ಕೊರೊನಾ ಸೋಂಕಿನಿಂದಾಗಿ ಇಡೀ ಶಿಕ್ಷಣ ವ್ಯವಸ್ಥೆ ಅಲ್ಲೋಲ ಕಲ್ಲೋಲವಾಗಿದೆ. ಖಾಸಗಿ ಶಾಲೆಗಳು ಸೇರಿದಂತೆ ಉಳ್ಳವರ ಮಕ್ಕಳು ಆನ್‍ಲೈನ್ ಶಿಕ್ಷಣ, ತಾಂತ್ರಿಕ ಜ್ಞಾನದ ಮೂಲಕ ಶಿಕ್ಷಣ ಪಡೆಯುತ್ತ ಹೆಜ್ಜೆ ಹಾಕಿದ್ದಾರೆ. ಗ್ರಾಮೀಣ ಭಾಗದ, ಸಾಮಾಜಿಕವಾಗಿ/ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಶಿಕ್ಷಣ ಒದಗಿಸಲು ಯಾವುದೇ ಯೋಜನೆಯನ್ನು ಈ ಸರ್ಕಾರ ಈವರೆಗೂ ರೂಪಿಸಿಲ್ಲಾ.
ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಬೇಜವಾಬ್ದಾರಿತನದಿಂದಾಗಿ, ಇಲ್ಲಿ ಕೇವಲ ಮಕ್ಕಳಷ್ಟೇ ಅಲ್ಲದೆ, ಶಾಲಾ ಶಿಕ್ಷಕರ, ಶಾಲಾಡಳಿತದ ವರ್ಗದ ಕಾರ್ಮಿಕರ ಹಾಗೂ ಪೋಷಕರ ಮೇಲೂ ಸಾಕಷ್ಟು ಒತ್ತಡಕ್ಕೆ ಒಳಗಾಗಿದ್ದಾರೆ. ಅಸಂಖ್ಯಾತ ಶಿಕ್ಷಕರು ಇಂದು ಕೆಲಸವಿಲ್ಲದೇ ಮೂರಾಬಟ್ಟೆಯಾಗಿದ್ದಾರೆ.

ಸರ್ಕಾರಿ ಶಾಲೆಗಳ ವೈಫಲ್ಯಕ್ಕೆ ಬಿಜೆಪಿ ಹೊಣೆ :

• ರಾಜ್ಯದಲ್ಲಿ 49,883 ಸರ್ಕಾರಿ ಶಾಲೆಗಳು, 7,377 ಅನುದಾನಿತ ಶಾಲೆಗಳು, 18,760 ಖಾಸಗಿ ಶಾಲೆಗಳು ಇವೆ.
• ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯ ವರದಿಯ ಅನ್ವಯ ರಾಜ್ಯದ ಪ್ರತಿ ನಾಲ್ಕು ಸರ್ಕಾರಿ ಶಾಲೆಗಳ ಪೈಕಿ ಮೂರು ಶಾಲೆಗಳಲ್ಲಿ ಕಂಪ್ಯೂಟರ್ ಸೌಕರ್ಯದ ಕೊರತೆಯಿದೆ.
• ಶೇ. 72.74 ಶಾಲೆಗಳಲ್ಲಿ ಕಂಪ್ಯೂಟರ್‍ಗಳು ಕಾರ್ಯನಿರ್ವಹಿಸುವ ಸ್ಥಿತಿಯಲ್ಲಿ ಇಲ್ಲ.
• ಶಾಲೆಗಳ ಚಿಕ್ಕ ಚಿಕ್ಕ ಕೊಠಡಿಗಳಲ್ಲಿ ಆರೋಗ್ಯ ಪರಿವೀಕ್ಷಣೆ ನಡೆಸುವುದು, ಮಕ್ಕಳ ನಡುವೆ ದೈಹಿಕ ಅಂತರ ಕಾಪಾಡಿಸುವುದು ಸವಾಲಿನ ವಿಚಾರ. ಜೊತೆಗೆ ಈಗಾಗಲೇ ನಷ್ಟದಲ್ಲಿರುವ ಅನೇಕ ಶಾಲೆಗಳನ್ನು ಪ್ರತಿನಿತ್ಯ ಸ್ಯಾನಿಟೈಸ್ ಮಾಡುವುದು ಅಸಾಧ್ಯದ ವಿಚಾರವೇ ಹೌದು.
• ಸರ್ಕಾರಿ ಶಾಲೆಗಳ ಮಕ್ಕಳು ಮಧ್ಯಾಹ್ನದ ಬಿಸಿಯೂಟ ವಂಚಿತರಾಗುತ್ತಿದ್ದು, ಅವರಲ್ಲಿ ಅಪೌಷ್ಠಿಕತೆ ಹೆಚ್ಚುತ್ತಿದೆ. ಹೀಗಿದ್ದರೂ ಸರ್ಕಾರ ಕೈಕಟ್ಟಿ ಕುಳಿತಿರುವುದೇಕೆ?

ಖಾಸಗಿ ಶಾಲೆಗಳಿಗೂ ಸಹಾಯ ಹಸ್ತ ಚಾಚಿಲ್ಲ :

• ಖಾಸಗಿ ಶಾಲೆಗಳ ಮಾಲೀಕರು ಬಾಡಿಗೆ ಕಟ್ಟಲು, ಶಿಕ್ಷಕರಿಗೆ ಸಂಬಳ ನೀಡಲು ಹಣವಿಲ್ಲ ಎಂದು ಶಾಲೆಗಳನ್ನೇ ಮಾರಾಟಕ್ಕಿಟ್ಟಿದ್ದಾರೆ. ಪ್ರಿ-ನರ್ಸರಿ ಹಾಗೂ ಪ್ರೈಮರಿ ಶಾಲೆಗಳ ಮಕ್ಕಳಿಗೆ ಆನ್‍ಲೈನ್ ಶಿಕ್ಷಣಕ್ಕೆ ನಿಷೇಧ ಹೇರಿರುವುದರಿಂದ ಪೋಷಕರು ಮಕ್ಕಳನ್ನು ಶಾಲೆಗೆ ಸೇರಿಸುತ್ತಿಲ್ಲ. ಇದು ಈ ಶಾಲೆಗಳನ್ನು ನಷ್ಟದ ಅಂಚಿಗೆ ದೂಡಿದೆ.
• ಬೆಂಗಳೂರಿನ 11 ಸಾವಿರ ಶಾಲಾ ಬಸ್‍ಗಳು ಸೇರಿದಂತೆ ರಾಜ್ಯಾದ್ಯಂತ ಸುಮಾರು 15 ಸಾವಿರ ಶಾಲಾ ಬಸ್‍ಗಳು ನಿಂತಲ್ಲೇ ನಿಂತಿದ್ದು, ಶಾಲಾ ಬಸ್ ಡ್ರೈವರ್‍ಗಳ ಹೊಟ್ಟೆಗೆ ತಣ್ಣಿರು ಬಟ್ಟೆಯೇ ಗತಿಯಾಗಿದೆ.
• ಅವೈಜ್ಞಾನಿಕ ಲಾಕ್‍ಡೌನ್‍ನಿಂದಾಗಿ ಶಾಲೆಗಳ ಮೇಲೆ ಪರೋಕ್ಷವಾಗಿ ಅವಲಂಬಿತ ಕೆಸಗಾರರಾದ ಆಯಾಗಳು, ಪಿಯೋನ್‍ಗಳು, ಡ್ರೈವರ್‍ಗಳು, ಹೆಲ್ಪರ್‍ಗಳು, ಕ್ಲೀನರ್‍ಗಳಿಗೆ ಯಾವುದೇ ಉದ್ಯೋಗವಿಲ್ಲದೆ ಅತಂತ್ರ ಬದುಕು ನಡೆಸುತ್ತಿದ್ದಾರೆ.
ಇವರೆಲ್ಲರಿಗೆ ಸಹಾಯ ಮಾಡಲು ಬಿಜೆಪಿ ಸರ್ಕಾರದ ಬಳಿ ಯಾವ ಯೋಜನೆ ಇವೆ? ಎಂದು ಪ್ರಶ್ನಿಸಿದ್ದಾರೆ.